ಬೆಂಗಳೂರು:ದೇಶಾದ್ಯಂತ ಜಾರಿಯಾಗಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.
ಇಂದಿನಿಂದ ಅನುಷ್ಠಾನಕ್ಕೆ ಬಂದಿರುವ ನೂತನ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023, ಭಾರತೀಯ ಸಾಕ್ಷ್ಯ ಅಧಿನಿಯಮ-2023ರ ಕುರಿತು ಇಲಾಖೆಯ ಎಲ್ಲಾ 7 ವಲಯಗಳು, 6 ಕಮೀಷನರೇಟ್ ಘಟಕಗಳು ಹಾಗೂ 1,063 ಪೊಲೀಸ್ ಠಾಣೆಗಳು ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಇನ್ನೂ ಹೆಚ್ಚಿನ ತರಬೇತಿ ಪ್ರಕ್ರಿಯೆ ಮುಂದುವರೆಯಲಿದೆ ಎಂದು 'ಎಕ್ಸ್' ಮೂಲಕ ಅವರು ಮಾಹಿತಿ ನೀಡಿದ್ದಾರೆ.