ಬೆಂಗಳೂರು: ದಿನೇ ದಿನೆ ನ್ಯಾಯಾಲಯಗಳಲ್ಲಿ ವಜಾಗೊಂಡ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾಕ್ಷಿ ಕೊರತೆ, ಸಾಕ್ಷಿಗಳ ಹೇಳಿಕೆ ಪಡೆದುಕೊಳ್ಳದಿರುವುದು ಸೇರಿದಂತೆ ತನಿಖಾಧಿಕಾರಿಗಳ ಲೋಪದಿಂದಾಗಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗುತ್ತಿದೆ. ನ್ಯೂನತೆ ಕಂಡುಬಂದ ಪ್ರಕರಣಗಳ ತನಿಖಾಧಿಕಾರಿಗಳಿಗೆ ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳುವ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯು ಮಾರ್ಗಸೂಚಿ ಹೊರಡಿಸಿದೆ.
ಖುಲಾಸೆಗೊಂಡ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿಯು ಲೋಪವೆಸಗಿದ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಆಯಾ ಪೊಲೀಸ್ ವಲಯ ಹಾಗೂ ಕಮಿಷನರೇಟ್ಗಳ ಶಿಸ್ತು ಪ್ರಾಧಿಕಾರಿಗಳಿಗೆ ಮಾರ್ಗಸೂಚಿ ಅನುಸರಿಸುವಂತೆ ರಾಜ್ಯ ಪೊಲೀಸ್ ಇಲಾಖೆಯ ಐಜಿಪಿ ಕಲಾ ಕೃಷ್ಣಸ್ವಾಮಿ ಆದೇಶಿಸಿದ್ದಾರೆ.
ಮಾರ್ಗಸೂಚಿಯಲ್ಲಿರುವ ಅಂಶಗಳೇನು?:ನಗರ ಕಮಿಷನರೇಟ್ ಹಾಗೂ ಜಿಲ್ಲಾ ಘಟಕಗಳಲ್ಲಿ ಸರ್ಕಾರಿ ಅಭಿಯೋಜಕರು ಒಳಗೊಂಡ ಖುಲಾಸೆಯಾದ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿ ರಚಿಸಲಾಗಿದೆ. ತನಿಖಾ ಪ್ರಕ್ರಿಯೆಯಲ್ಲಿ ಲೋಪ, ಅಭಿಯೋಜನೆಗೆ ಪೂರಕ ಸಾಕ್ಷ್ಯ ನುಡಿಯದಿರುವುದು, ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದಿರುವುದು ಪ್ರಕರಣಗಳ ವಜಾಕ್ಕೆ ಕಾರಣವಾಗುತ್ತಿದೆ. ಇದರಿಂದ ಆರೋಪಿಗಳು ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಪ್ರಕರಣಗಳಲ್ಲಿ ತನಿಖೆ ಕೈಗೊಂಡ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.