ಬೆಂಗಳೂರು : ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜ್ಯ ಮಟ್ಟದ ಎರಡನೇ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಸಲ್ಲಿಸುವ ದೂರು ಹಾಗೂ ಮನವಿಗಳನ್ನು ಸ್ವೀಕರಿಸಲು ಇಲಾಖಾವಾರು ಕೌಂಟರ್ಗಳು, ಅಧಿಕಾರಿಗಳ ನಿಯೋಜನೆ ಹಾಗೂ ಎಸ್ಒಪಿ ಜಾರಿ ಮಾಡಲಾಗಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯಮಟ್ಟದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಿದ್ದರು. ಇದೀಗ ಶಕ್ತಿ ಕೇಂದ್ರದಲ್ಲಿ ಜನರ ಅಹವಾಲು ಸ್ವೀಕರಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ನವೆಂಬರ್ 27 ರಂದು ನಡೆದ ಜನತಾ ದರ್ಶನದಲ್ಲಿ 4030 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈವರೆಗೆ 3,738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು.
ಇಲಾಖಾವಾರು ಕೌಂಟರ್ಗಳು :ಮುಖ್ಯಮಂತ್ರಿಗಳ ಜನತಾದರ್ಶನ ನಡೆಯುವ ಸ್ಥಳದಲ್ಲಿ ಸಚಿವಾಲಯದ ಎಲ್ಲ ಇಲಾಖೆಗಳ ಸ್ಟಾಲ್ಗಳನ್ನು ಅಳವಡಿಸಲಾಗಿದ್ದು, ಪ್ರತಿ ಸ್ಟಾಲ್ಗಳಿಗೆ ಸಂಖ್ಯೆಯನ್ನು ನೀಡಲಾಗಿದೆ. ಜನತಾ ದರ್ಶನಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನಾಗರಿಕರನ್ನು ಪ್ರಥಮ ಹಂತದಲ್ಲಿ ವಿಚಾರಿಸಿ, ಯಾವ ಇಲಾಖೆಯ ಸ್ಟಾಲ್ ಗೆ ನಿರ್ದೇಶಿಸಿ ಕಳಿಸಬೇಕು ಎಂದು ವಿಂಗಡಿಸಲು ಅನುಭವಿ ಅಧಿಕಾರಿ - ಸಿಬ್ಬಂದಿಗಳ ವಿಚಾರಣಾ ಕೌಂಟರ್ (enquiry counter) ತೆರೆಯಲಾಗಿದೆ. ಅಲ್ಲಿ ನಾಗರಿಕರ ಮೊಬೈಲ್ ನಂಬರ್ ಮತ್ತು ಪ್ರಾಥಮಿಕ ವಿವರಗಳನ್ನು ದಾಖಲಿಸಲು ರಿಜಿಸ್ಟರ್ ಹಾಗೂ ಅವರನ್ನು ಯಾವ ಇಲಾಖೆಗೆ ಕಳುಹಿಸಲಾಗಿದೆ ಎಂದು ಸ್ಟಾಲ್ ನಂಬರ್ ನಮೂದಿಸಲಾಗುವುದು. ಸ್ಟಾಲ್ ಗಳಲ್ಲಿ ನಾಗರಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ, ವಯೋವೃದ್ಧರು / ಹಿರಿಯ ನಾಗರಿಕರು / ವಿಕಲಚೇತನರು / ಗರ್ಭಿಣಿಯರು / ಸಣ್ಣ ಮಕ್ಕಳೊಂದಿಗೆ ಬಂದಂತಹ ನಾಗರಿಕರಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.
ಇಲಾಖೆಯ ಕಾರ್ಯದರ್ಶಿಗಳು ತಮ್ಮ ಇಲಾಖೆಯ ಸಚಿವಾಲಯದ ಹಾಗೂ ಅಧೀನ ಇಲಾಖೆಯ ಮುಖ್ಯಸ್ಥರು, ಅಧಿಕಾರಿ, ಸಿಬ್ಬಂದಿಯವರ ತಂಡದೊಡನೆ ಸ್ಟಾಲ್ ನಲ್ಲಿದ್ದು, ಜನತಾದರ್ಶನಗಳಲ್ಲಿ ಬಂದ ಅರ್ಜಿಗಳನ್ನು ನಾಗರಿಕರಿಂದ ಸ್ವೀಕರಿಸಲಿದ್ದಾರೆ.