ದೊಡ್ಡಬಳ್ಳಾಪುರ : ಎರಡು ಕೊಠಡಿಗಳ ಸರ್ಕಾರಿ ಶಾಲೆಯನ್ನ 10 ಕೊಠಡಿಗಳ ವಿಶಾಲ ಶಾಲೆಯಾಗಿ ಮಾಡಿದ್ದಲ್ಲದೇ, ಶಾಲೆಗೆ ಹೈಟೆಕ್ ಸ್ವರ್ಶ ನೀಡಿದ ಶಿಕ್ಷಕಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸಿಕ್ಕಿದೆ. ಶಿಕ್ಷಕ ಮನೆತನದ ಹಿನ್ನೆಲೆ ಹೊಂದಿರುವ ಅವರ ಒಡಹುಟ್ಟಿದ ಆರು ಮಂದಿ ಸಹೋದರಿಯರೂ ಟೀಚರ್ಸ್. ಕೈಹಿಡಿದ ಗಂಡ ಶಿಕ್ಷಕ ಹಾಗೂ ಮಗಳು ಸಹ ಮೇಷ್ಟ್ರಾಗಿರುವುದು ವಿಶೇಷವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಿ ಎಂ. ಹೆಚ್ ಅವರಿಗೆ 2024ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ತಮ್ಮ 21ನೇ ವಯಸ್ಸಿನಲ್ಲೇ ಶಿಕ್ಷಕ ವೃತ್ತಿಯನ್ನ ಆರಂಭಿಸಿರುವ ಅವರು, 34 ವರ್ಷಗಳವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸಾವಿರಾರು ಮಕ್ಕಳಿಗೆ ವಿದ್ಯೆಯನ್ನ ಧಾರೆ ಎರೆದಿದ್ದಾರೆ.
2016ರಲ್ಲಿ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬಂದ ಅವರು, ಶಾಲೆಯ ವಾತಾವರಣವನ್ನ ಬದಲಾಯಿಸಿದರು. ಎರಡು ಕೊಠಡಿಯಿದ್ದ ಶಾಲೆಯನ್ನ ಇವತ್ತು 10 ಕೊಠಡಿಗಳ ವಿಶಾಲ ಶಾಲೆಯನ್ನಾಗಿ ಬದಲಾಯಿಸಿದ್ದಾರೆ. ದಾನಿಗಳು ಮತ್ತು ವಿವಿಧ ಕಂಪನಿಗಳ ಸಿಎಸ್ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಎರಡು ಎಕರೆ ವಿಸ್ತೀರ್ಣ ಇರುವ ಶಾಲೆಯನ್ನ ಉದ್ಯಾನವನದಂತೆ ಬದಲಾಯಿಸಿದ್ದಾರೆ. ಇದರ ಜೊತೆಯಲ್ಲಿ ಸೋಲಾರ್, ವಿದ್ಯುತ್, ಕಂಪ್ಯೂಟರ್, ವಿಶಾಲವಾದ ಡೈನಿಂಗ್ ಹಾಲ್ ಮತ್ತು ಹೈಟೆಕ್ ಶೌಚಾಲಯದ ಸೌಲಭ್ಯವನ್ನ ಶಾಲೆಗೆ ತರುವಲ್ಲಿ ಶ್ರಮಿಸಿದ್ದಾರೆ.
ರಾಜ್ಯ ಮಟ್ಟದ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾಗಿರುವ ಮಂಗಳಗೌರಿ ಎಂ. ಹೆಚ್ ಅವರನ್ನ ಗಣ್ಯರು ಸನ್ಮಾನಿಸುವ ಮೂಲಕ ಅಭಿನಂದಿಸಿದ್ದಾರೆ. ಇದೇ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಭಾರತ ಸೇವಾದಳ ತಾಲೂಕು ಅಧ್ಯಕ್ಷರಾದ ಆರ್. ವಿ ಮಹೇಶ್ ಕುಮಾರ್, ಮಂಗಳಗೌರಿಯವರು ವಿದ್ಯಾರ್ಥಿಗಳನ್ನ ತಮ್ಮ ಮಕ್ಕಳಂತೆ ಕಂಡವರು. ತಮ್ಮ 34 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಸಾವಿರಾರು ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಅವರಿಗೆ ಪ್ರಶಸ್ತಿ ಬಂದಿರುವುದು ನಮಗೂ ಖುಷಿ ತಂದಿದೆ ಎಂದರು.