ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ನಿಧನದ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
10 - 12 - 2024 ರಿಂದ 12 - 12 - 2024 ರವರೆಗೆ ಮೂರು ದಿನಗಳು ಶೋಕವನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳು ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಎಂದು ತಿಳಿಸಲಾಗಿದೆ.
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ ಎಸ್ ಎಂ ಕೃಷ್ಣ 10 - 12 -2 024ರ ಮಂಗಳವಾರದಂದು ಮಧ್ಯರಾತ್ರಿ 02:30ಕ್ಕೆ ನಿಧನರಾದ ವಿಷಯವನ್ನು ಕರ್ನಾಟಕ ರಾಜ್ಯ ಸರ್ಕಾರವು ತೀವ್ರ ಸಂತಾಪದಿಂದ ಈ ಮೂಲಕ ಪ್ರಕಟಿಸಿದೆ. ದಿವಂಗತರ ಅಂತ್ಯಕ್ರಿಯೆಯನ್ನು 11 - 12 - 2024ರಂದು ಬುಧವಾರ ಹುಟ್ಟೂರಾದ ಮಂಡ್ಯ ಜಿಲ್ಲೆಯಲ್ಲಿ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ತಿಳಿಸಿದೆ.
ಸದಾಶಿವನಗರದಲ್ಲಿರುವ ಎಸ್. ಎಂ. ಕೃಷ್ಣ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ನಟಿ, ಮಾಜಿ ಸಂಸದೆ ರಮ್ಯಾ, ಮಾಜಿ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ಸೇರಿದಂತೆ ಸಿನಿಮಾ ನಟ-ನಟಿಯರು, ರಾಜಕೀಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಫಿ ಡೇ ಪಕ್ಕದಲ್ಲಿ ಎಸ್ಎಂ ಕೃಷ್ಣ ಅಂತ್ಯಕ್ರಿಯೆ; ನಾಳೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಅವರ ತಂದೆ ಎಸ್. ಸಿ. ಮಲ್ಲಯ್ಯ ಮತ್ತು ಸಹೋದರನ ಅಂತ್ಯಕ್ರಿಯೆಯನ್ನು ಅವರ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಸಲಾಗಿತ್ತು. ಅದೇ ಸ್ಥಳದಲ್ಲಿ ಎಸ್. ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಕೂಡ ನಡೆಸಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಅವರ ಕುಟುಂಬದ ನಿರ್ಧಾರದಂತೆ ಎಸ್. ಎಂ. ಕೃಷ್ಣ ಅವರ ತಮ್ಮಿಷ್ಟದ ಕಾಫಿ ಡೇ ಪಕ್ಕದಲ್ಲೇ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು ವಿದೇಶದಲ್ಲಿರುವ ಸಂಬಂಧಿಕರು ಆಗಮಿಸುವುದು ತಡವಾಗುವ ಹಿನ್ನೆಲೆಯಲ್ಲಿ ಎಸ್. ಕೃಷ್ಣ ಅವರ ಅಂತ್ಯಕ್ರಿಯೆಯನ್ನು ಬುಧವಾರ ನಡೆಸಲು ನಿರ್ಧರಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಅಜಾತಶತ್ರು ಎಸ್. ಎಂ. ಕೃಷ್ಣ ರಾಜಕೀಯ ಜೀವನ ಹೇಗಿತ್ತು?