ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗಧಾಮ ಪಿಲಿಕುಳದಲ್ಲಿ ಡಿಸೆಂಬರ್ ತಿಂಗಳಲ್ಲಿ ಕಂಬಳ ಆಯೋಜನೆ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನಡೆಯಲಿರುವ ಕಂಬಳ ಸ್ಪರ್ಧೆಯನ್ನು ಪ್ರಾಣಿ ಸಂಗ್ರಹಾಲಯದ ಸಮೀಪ ನಡೆಸಲಾಗುತ್ತಿರುವುದರಿಂದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಆಕ್ಷೇಪಿಸಿ ಪೆಟಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರಾದ ನಿಲೋಫರ್ ಅಕ್ಬರ್, ಪಿಲಿಕುಳದಲ್ಲಿ ಕಂಬಳ ಆಯೋಜನೆಯಿಂದ ಅಲ್ಲಿಯ ನಿಸರ್ಗಧಾಮದಲ್ಲಿನ ಪ್ರಾಣಿಗಳಿಗೆ ತೊಂದರೆಯಾಗಲಿದೆಯೇ ಎಂಬುದರ ಕುರಿತು ಪರಿಶೀಲನೆಗೆ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಇನ್ನೂ ವರದಿಯನ್ನು ಸಲ್ಲಿಸಬೇಕಾಗಿದೆ. ಆದ್ದರಿಂದ ಕಾಲಾವಕಾಶ ನೀಡಬೇಕು ಎಂದರು.
ಈ ಮಾಹಿತಿ ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.
ಕಳೆದ ವಿಚಾರಣೆ ವೇಳೆ, ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಕರಾವಳಿ ಭಾಗದಲ್ಲಿ ಕಂಬಳ ಆಯೋಜನೆ ಮಾಡುವ ಬಗ್ಗೆ ಅರ್ಜಿದಾರರಿಗೆ ತಕರಾರಿಲ್ಲ. ಪ್ರಾಣಿ ಸಂಗ್ರಹಾಲಯದ ಬಳಿ ಕಂಬಳ ಸ್ಪರ್ಧೆ ನಡೆಸಿದರೆ ಇದರಿಂದ ಪ್ರಾಣಿಗಳು ತೊಂದರೆ ಅನುಭವಿಸಲಿದೆ ಎನ್ನವುದು ಅರ್ಜಿದಾರರ ವಾದಗಿದೆ. ಈ ಬಗ್ಗೆ ಪ್ರಾಣಿಗಳಿಗೆ ನಿಜವಾಗಿಯೂ ತೊಂದರೆಯಾಗುವ ಬಗ್ಗೆ ತಾಂತ್ರಿಕ ಅಧ್ಯಯನ ನಡೆಸಲು ನಾಲ್ವರು ತಜ್ಞರ ಸಮಿತಿ ರಚಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ:ನ.5ರಂದು ಬೆಂಗಳೂರು ಮಹಾನಗರದಲ್ಲಿ ಕಂಬಳ ಆಯೋಜಿಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಪೆಟಾ ಕೋರಿತ್ತು. ಆಗ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವ ನಿರ್ಧಾರವಾಗಿಲ್ಲ. ಪಿಲಿಕುಳದಲ್ಲಿ ನ. 17ರಂದು ಸ್ಪರ್ಧೆ ನಡೆಸಲಾಗುವುದು ಎಂದು ತಿಳಿಸಿತ್ತು. ಆನಂತರ ಪೆಟಾವು ಪಿಲಿಕುಳದಲ್ಲಿ ಪ್ರಾಣಿ ಸಂಗ್ರಹಾಲಯದ ಸಮೀಪ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಇದರಿಂದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗಲಿದೆ, ಸ್ಥಳ ಬದಲಾಯಿಸಬೇಕು ಎಂದು ಕೋರಿದೆ.
ಇದನ್ನೂ ಓದಿ:ಬೆಂಗಳೂರು ಕಂಬಳಕ್ಕೆ ಅನುಮತಿ ನೀಡದಂತೆ ಹೈಕೋರ್ಟ್‌ಗೆ ಪೆಟಾ ಅರ್ಜಿ