ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿನ 709 ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ಇಂದು ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಪಿ.ಯೋಗೀಶ್ವರ್ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಬಿಜೆಪಿ ಅವಧಿಯಲ್ಲಿ ಕೈಗೊಂಡಿದ್ದ 709 ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ. 1,578.13 ಕೋಟಿ ಮೌಲ್ಯದ ಕಾಮಗಾರಿ ತಡೆಹಿಡಿಯಲಾಗಿದೆ. 709 ಕಾಮಗಾರಿಗಳ ಪೈಕಿ 480 ಕಾಮಗಾರಿಗಳು, 1,035.69 ಕೋಟಿ ಮೌಲ್ಯದ ಕಾಮಗಾರಿ ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಘಾಟಿ ಸುಬ್ರಮಣ್ಯ ಪ್ರಾಧಿಕಾರ ರಚನೆ:ಘಾಟಿ ಸುಬ್ರಮಣ್ಯ ಸೇರಿದಂತೆ ಹೆಚ್ಚು ಭಕ್ತಾದಿಗಳು ಬರುವ ರಾಜ್ಯದ ಎ ಗ್ರೇಡ್ ದೇವಾಲಯಗಳ ಅಭಿವೃದ್ಧಿಗಾಗಿ ದೇವಾಲಯಗಳಿಗೆ ಪ್ರಾಧಿಕಾರ ರಚನೆ ಮಾಡುವುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ರವಿ ಬದಲಿಗೆ ಯು.ಬಿ.ವೆಂಕಟೇಶ್, ಘಾಟಿ ಸುಬ್ರಮಣ್ಯ ದೇವಾಲಯದ ಅಭಿವೃದ್ಧಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಘಾಟಿ ಸುಬ್ರಮಣ್ಯ ದೇವಾಲಯ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತದೆ. ದೇವಾಲಯಕ್ಕೆ ಪ್ರಾಧಿಕಾರ ರಚನೆ ಮಾಡುತ್ತೇವೆ. ಪಾರ್ಕಿಂಗ್ ಸಮಸ್ಯೆ ಇದೆ. ಪಾರ್ಕಿಂಗ್‌ಗಾಗಿ ಅಗತ್ಯ ಸ್ಥಳ ಗುರುತಿಸಲಾಗಿದೆ. ದೇವಾಲಯಕ್ಕೆ 10 ಕೋಟಿ ರೂ ವಾರ್ಷಿಕ ಆದಾಯ ಬರುತ್ತದೆ. ಹಣದ ಕೊರತೆ ಇಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಹೆಚ್ಚು ಭಕ್ತರು ಬರುವ ಎಲ್ಲಾ ಎ ಗ್ರೇಡ್ ದೇವಾಲಯಗಳಿಗೆ ವಿಶೇಷ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ವಿಚಾರ ಮುಂದಿನ ಕ್ಯಾಬಿನೆಟ್ ಮುಂದೆ ಬರಲಿದೆ. ಕ್ಯಾಬಿನೆಟ್ನಲ್ಲಿ ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲು ಒಪ್ಪಿಗೆ ಪಡೆಯಲಾಗುತ್ತದೆ. ಪ್ರಾಧಿಕಾರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರು ಇರಲಿದ್ದು, ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರಗಳು ಅನುಕೂಲ ಆಗಲಿವೆ ಎಂದರು.
ಮುದನೂರು ದೇವಾಲಯ ಜೀರ್ಣೋದ್ಧಾರ:ದೇವರ ದಾಸಿಮಯ್ಯ ಅವರ ಜನ್ಮಸ್ಥಳ ಮುದನೂರು ಗ್ರಾಮದಲ್ಲಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಇಲಾಖೆ ಕ್ರಮ ಕೈಗೊಳ್ಳುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುದನೂರು ಗ್ರಾಮದಲ್ಲಿ 108 ದೇವಾಲಯ ಇವೆ. ಜೀರ್ಣೋದ್ಧಾರ ಮಾಡುವ ಜಾಗದಲ್ಲಿ ಇಲ್ಲಿ ಜನರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ದೇವಸ್ಥಾನದ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಮನೆಗಳನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ದೇವಾಲಯಗಳ ಜೀರ್ಣೋದ್ಧಾರ ತಡವಾಗಿರೋದು ಸತ್ಯ. ಆದಷ್ಟು ಬೇಗ ಮನೆಗಳನ್ನ ಸ್ಥಳಾಂತರ ಮಾಡಿ ದೇವಾಲಯಗಳ ಜೀರ್ಣೋದ್ಧಾರ ಕೆಲಸ ಪ್ರಾರಂಭ ಮಾಡುತ್ತೇವೆ. ಕಂದಾಯ ಇಲಾಖೆ ಆಯುಕ್ತರ ಜೊತೆ ಚರ್ಚೆ ಮಾಡಿ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಹಾಲಿನ ದರ ಪರಿಷ್ಕರಣೆ ಇಲ್ಲ:ರಾಜ್ಯದಲ್ಲಿ ಪ್ರಸ್ತುತ ಇರುವ ಹಾಲಿನ ಬೆಲೆ ಹೆಚ್ಚು ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ, ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲು ಪರಿಶೀಲಿಸಲಾಗುತ್ತದೆ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ರೈತರಿಂದ ಹಾಲು ಖರೀದಿ ದರ 32.42 ರೂ. ಇದ್ದು, ಹೊರ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಮಾತ್ರ ಕರ್ನಾಟಕಕ್ಕಿಂತ ಕಡಿಮೆ ದರದಲ್ಲಿ ಹಾಲು ಉತ್ಪಾದಕರಿಂದ ಹಾಲು ಖರೀದಿ ಮಾಡಲಾಗುತ್ತಿದ್ದರೆ ಆಂಧ್ರಪ್ರದೇಶದ, ಕೇರಳ, ಗುಜರಾತ್‌ನಲ್ಲಿ 3.50 ರೂ.ನಿಂದ 9 ರೂ.ವರೆಗೆ ನಮ್ಮ ರಾಜ್ಯದ ಖರೀದಿ ದರಕ್ಕಿಂತ ಹೆಚ್ಚಾಗಿದೆ ಎಂದರು.
ಅದೇ ರೀತಿ ನಂದಿನಿ ಟೋನ್ಡ್ ಹಾಲು 42 ರೂ.ಗೆ ಮಾರಾಟ ಮಾಡುತ್ತಿದ್ದು, ನೆರೆ ರಾಜ್ಯಕ್ಕೆ ಹೋಲಿಸಿದಲ್ಲಿ 10 ರಿಂದ 16 ರೂವರೆಗೆ ಕಡಿಮೆ ಇದೆ. ಗ್ರಾಹಕರಿಗೆ ನಂದಿನಿ ಬ್ರಾಂಡ್ ಹಾಲು ಇತರ ರಾಜ್ಯಗಳ ಬ್ರಾಂಡ್ ಗಿಂತ ಕಡಿಮೆ ದರಕ್ಕೆ ಸಿಗುತ್ತಿದೆ. ಕರ್ನಾಟಕದ ನಂದಿನ ಹಾಲಿನ ಖರೀದಿ ದರ 32.42 ರೂ. ಮಾರಾಟ ದರ 42 ರೂ. ಆಂಧ್ರಪ್ರದೇಶದ ವಿಜಯ ಬ್ರಾಂಡ್ ಖರೀದಿ ದರ 35.99 ರೂ. ಮಾರಾಟದರ 58 ರೂ. ಕೇರಳದ ಮಿಲ್ಮಾ ಬ್ರಾಂಡ್ ಖರೀದಿ ದರ 41.76 ರೂ. ಮಾರಾಟ ದರ 52 ರೂ. ಮಹಾರಾಷ್ಟ್ರದ ಅಮೂಲ್ ಖರೀದಿ ದರ 29.72 ರೂ. ಮತ್ತು ಮಾರಾಟ ದರ 54 ರೂ. ಇದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೊಬ್ಬರಿ ಖರೀದಿಗೆ ರೈತರ ನೋಂದಣಿ ಪ್ರಕ್ರಿಯೆ ಒಂದು ವಾರ ಸ್ಥಗಿತ: ಸಚಿವ ಶಿವಾನಂದ ಪಾಟೀಲ್