ಬೆಂಗಳೂರು:ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬರ, ಪಂಚ ಗ್ಯಾರಂಟಿ ಹೊರೆಯಿಂದ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಕಸರತ್ತು ನಡೆಸುತ್ತಿದೆ. ಪಂಚ ಗ್ಯಾರಂಟಿ, ಬದ್ಧ ವೆಚ್ಚ, ಬಂಡವಾಳ ವೆಚ್ಚದ ಹೊರೆಯನ್ನು ತುಂಬಲು ಸಾಲದ ಮೊರೆ ಹೋಗಿದೆ. ಅದರಲ್ಲೂ 2023-24 ಸಾಲಿನಲ್ಲಿ ಬಜೆಟ್ ಅಂದಾಜು ಮೀರಿ ಹೆಚ್ಚಿನ ಸಾಲ ಮಾಡಿರುವುದು ಬೆಳಕಿಗೆ ಬಂದಿದೆ.
2023-24ರ ಆರ್ಥಿಕ ವರ್ಷ ಮುಕ್ತಾಯವಾಗಿದೆ. ಆ ವರ್ಷದ ಆರ್ಥಿಕ ಸ್ಥಿತಿಗತಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಹಣಕಾಸು ನಿರ್ವಹಣೆ ತಲೆನೋವಾಗಿ ಪರಿಣಮಿಸಿತು. ಅದರಲ್ಲೂ ಪಂಚ ಗ್ಯಾರಂಟಿಗಳ ಹೊರೆ ಮಧ್ಯೆ ಬರಸಿಡಿಲಿನಂತೆ ಹೊಡೆದ ಬರ ಡಬಲ್ ಸಂಕಷ್ಟ ತಂದೊಡ್ಡಿತು. ಇತ್ತ ಪ್ರಸಕ್ತ ವರ್ಷದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿ ತಲುಪದ ಕಾರಣ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಇದರಿಂದ ಪಂಚ ಗ್ಯಾರಂಟಿಗಳಿಗೆ ಅನುದಾನ, ಬದ್ಧ ವೆಚ್ಚದ ಹೊರೆ, ಬರ ನಿರ್ವಹಣೆ, ತೆರಿಗೆ ಸಂಗ್ರಹದ ಕೊರತೆಯನ್ನು ನಿಭಾಯಿಸಲು ಸರ್ಕಾರಕ್ಕೆ ಸಾಲ ಮಾಡುವುದೊಂದೇ ದಾರಿಯಾಗಿದೆ.
2023- 24ರ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಕೇಂದ್ರದಿಂದ 6,254 ಕೋಟಿ ರೂಪಾಯಿ, ಮುಕ್ತ ಮಾರುಕಟ್ಟೆಯಲ್ಲಿ 78,363 ಕೋಟಿ ರೂಪಾಯಿ, ಎಲ್ಐಸಿ, ಎನ್ಎಸ್ಎಸ್ಎಫ್, ಎನ್ಸಿಡಿಸಿಯಿಂದ 1,201 ಕೋಟಿ ರೂಪಾಯಿ ಸೇರಿದಂತೆ ಒಟ್ಟು ಅಂದಾಜು 85,818 ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡುವುದಾಗಿ ಬಜೆಟ್ನಲ್ಲಿ ತಿಳಿಸಲಾಗಿತ್ತು. 2023-24 ಬಜೆಟ್ ವರ್ಷ ಮುಕ್ತಾಯವಾಗಿದ್ದು, ಸರ್ಕಾರ ಬಜೆಟ್ ಅಂದಾಜಿಗಿಂತ ಹೆಚ್ಚಿನ ಸಾಲ ಮಾಡಿರುವುದು ಆರ್ಥಿಕ ಇಲಾಖೆ ನೀಡಿದ ಸಾರ್ವಜನಿಕ ಸಾಲದ ಅಂಕಿ-ಅಂಶದಿಂದ ಬಯಲಾಗಿದೆ.
ಬಜೆಟ್ ಅಂದಾಜು ಮೀರಿ ಸಾಲ ಎತ್ತುವಳಿ?:ರಾಜ್ಯ ಸರ್ಕಾರ 2023-24ರ ಸಾಲಿನ ಬಜೆಟ್ನಲ್ಲಿ ಒಟ್ಟು 85,818 ಕೋಟಿ ರೂ. ಸಾಲ ಮಾಡುವುದಾಗಿ ಅಂದಾಜಿಸಿತ್ತು. ಅದರಂತೆ 2023ರ ಅಕ್ಟೋಬರ್ 17 ರಿಂದ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ 78,000 ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಿದೆ.
ಆರ್ಥಿಕ ಇಲಾಖೆ 2023ರ ಏಪ್ರಿಲ್ನಿಂದ 2024ರ ಫೆಬ್ರವರಿ ಅಂತ್ಯದವರೆಗೆ ನೀಡಿರುವ ಅಧಿಕೃತ ಜಮೆ-ವೆಚ್ಚಗಳ ಅಂಕಿಅಂಶದಂತೆ ಸಾರ್ವಜನಿಕ ಸಾಲವಾಗಿ ಒಟ್ಟು 67,367 ಕೋಟಿ ರೂ. ಎತ್ತುವಳಿ ಮಾಡಿದೆ. ಈ ಪೈಕಿ ಫೆಬ್ರವರಿವರೆಗೆ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ 57 ಸಾವಿರ ಕೋಟಿ ರೂಪಾಯಿ ಸಾಲ ಪಡೆದರೆ, ಕೇಂದ್ರ ಹಾಗೂ ಇತರ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ 10,367 ಎತ್ತುವಳಿ ಮಾಡಿದೆ. ಆ ಮೂಲಕ ಫೆಬ್ರವರಿ ಅಂತ್ಯಕ್ಕೆ ಒಟ್ಟು 67,367 ಕೋಟಿ ಸಾರ್ವಜನಿಕ ಸಾಲ ಮಾಡಿರುವುದಾಗಿ ಆರ್ಥಿಕ ಇಲಾಖೆ ತಿಳಿಸಿದೆ. ಮಾರ್ಚ್ ಅಂತ್ಯದವರೆಗಿನ ಜಮೆ, ವೆಚ್ಚ, ಸಾಲದ ಅಂತಿಮ ಅಂಕಿಅಂಶವನ್ನು ಆರ್ಥಿಕ ಇಲಾಖೆ ಇನ್ನೂ ಸಿದ್ಧಪಡಿಸುತ್ತಿದೆ.
ಆರ್ಥಿಕ ವರ್ಷದ ಕೊನೆ ತಿಂಗಳಾದ ಮಾರ್ಚ್ನಲ್ಲಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಒಟ್ಟು 21,000 ಕೋಟಿ ರೂಪಾಯಿ ಸಾಲ ಮಾಡಿದೆ. ಫೆಬ್ರವರಿ ತಿಂಗಳವರೆಗಿನ ಒಟ್ಟು ಸಾಲದ ಮೊತ್ತವಾದ 67,367 ಕೋಟಿಗೆ ಸೇರ್ಪಡೆಗೊಳಿಸಿದರೆ ಒಟ್ಟು 88,367 ಕೋಟಿ ರೂಪಾಯಿ ಸಾಲವಾಗಿದೆ. ಅಂದರೆ ಬಜೆಟ್ ಅಂದಾಜು 85,818 ಕೋಟಿ ಸಾಲದ ಮೊತ್ತ ಮೀರಿ ಸುಮಾರು 2,549 ಕೋಟಿ ರೂ. ಹೆಚ್ಚುವರಿ ಸಾಲ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ ಇತರ ಮೂಲಗಳಿಂದಲೂ ಸಾಲ ಮಾಡಲಾಗಿದೆ ಎಂದು ಹೇಳಲಾಗಿದ್ದು, ಅದರ ನಿಖರ ಅಂಕಿಅಂಶ ಲಭ್ಯವಾಗಿಲ್ಲ. ಇತರ ಮೂಲಗಳ ಸಾಲದ ಮೊತ್ತವೂ ಸೇರಿದರೆ 2023-24 ಸಾಲಿನಲ್ಲಿ 90 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಲಾಗಿದೆ ಎಂದು ಹೇಳಲಾಗಿದೆ.
2024-25ರ ಮೊದಲ ತ್ರೈ ಮಾಸಿಕದಲ್ಲೇ ಸಾಲ:2024-25ರ ಸಾಲಿನ ಬಜೆಟ್ ವರ್ಷದ ಮೊದಲ ತ್ರೈಮಾಸಿಕದಲ್ಲೇ ಆರ್ಬಿಐ ಮೂಲಕ ಸಾಲ ಎತ್ತುವಳಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈ ಆರ್ಥಿಕ ವರ್ಷದಲ್ಲಿ ಅಂದಾಜು 1,05,246 ಕೋಟಿ ರೂಪಾಯಿ ಸಾಲ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದಿಂದ 6,855 ಕೋಟಿ, ಬಹಿರಂಗ ಮಾರುಕಟ್ಟೆ ಮೂಲಕ 96,840 ಕೋಟಿ ರೂಪಾಯಿ ಸಾಲ ಮಾಡಲು ಯೋಜಿಸಲಾಗಿದೆ.
ಕಳೆದ ಬಾರಿ ರಾಜ್ಯ ಸರ್ಕಾರ ಆರ್ಥಿಕ ವರ್ಷದ 2 ತ್ರೈಮಾಸಿಕ ಅಂದರೆ ಮೊದಲು 6 ತಿಂಗಳು ಆರ್ಬಿಐ ಮೂಲಕ ಸಾಲವನ್ನೇ ಪಡೆದಿರಲಿಲ್ಲ. ಆದರೆ, ಈ ಬಾರಿ ಮೊದಲ ತ್ರೈಮಾಸಿಕದಲ್ಲೇ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡುವುದಾಗಿ ಆರ್ಬಿಐಗೆ ಮಾಹಿತಿ ನೀಡಿದೆ. ಅದರಂತೆ ಏಪ್ರಿಲ್- ಜೂನ್ ಮೊದಲ ತ್ರೈಮಾಸಿಕದಲ್ಲೇ 10,000 ಕೋಟಿ ರೂಪಾಯಿ ಸಾಲ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಇದನ್ನೂ ಓದಿ:ಜಲಮಂಡಳಿಯಿಂದ ಮಾದರಿ ಕಾರ್ಯ; ಒಂದು ತಿಂಗಳಲ್ಲಿ 986 ಮಳೆ ನೀರು ಇಂಗು ಗುಂಡಿಗಳ ನಿರ್ಮಾಣ - Water Board