ಚಿಕ್ಕಮಗಳೂರು : ಕಳೆದ ಕೆಲ ದಿನಗಳಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು, ಅರೆಮಲೆನಾಡು, ಬಯಲು ಸೀಮೆ ಸೇರಿದಂತೆ ಪಶ್ಚಿಮ ಘಟ್ಟ ಹಾಗೂ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ಹಲವಾರು ಅವಘಡಗಳು ಜರುಗಿದ ಬೆನ್ನಲ್ಲೇ, ಈಗ ಕಾಫಿನಾಡಿನ ಜನತೆ ಹಾಗೂ ಸುತ್ತಮುತ್ತಲ ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತಹ ಒಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಮುಂಗಾರು ಮಳೆ ಆರ್ಭಟ ಬೆನ್ನಲ್ಲೇ ಕಾಫಿನಾಡಿಗೆ ಶಾಕಿಂಗ್ ನ್ಯೂಸ್ ಬಂದಿದೆ. ಆಗಸ್ಟ್ ತಿಂಗಳಲ್ಲಿ ಮಳೆ ತೀವ್ರ ಸ್ವರೂಪ ಪಡೆಯೋ ಸಾಧ್ಯತೆ ಇರುವುದರಿಂದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿದ್ದು, ಈ ಬಗ್ಗೆ ಜನರಿಗೆ ತಿಳಿಸುವುದರ ಮೂಲಕ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ 158 ಸ್ಥಳಗಳನ್ನು ಅಪಾಯಕಾರಿ ಸ್ಥಳಗಳೆಂದು ಈವರೆಗೆ ಗುರುತು ಮಾಡಲಾಗಿದೆ. ಶೃಂಗೇರಿ ತಾಲೂಕಿನಲ್ಲಿ ಬರೋಬ್ಬರಿ 87 ಸ್ಥಳಗಳು, ಎನ್ಆರ್ ಪುರ ತಾಲೂಕಿನಲ್ಲಿ 21 ಸ್ಥಳಗಳು, ಮೂಡಿಗೆರೆ ತಾಲೂಕಿನಲ್ಲಿ 17 ಡೇಂಜರ್ ಸ್ಪಾಟ್ ಎಂದು ಗುರುತಿಸಿ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.