ಬೆಂಗಳೂರು:ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನ, ಸಣ್ಣ ನೀರಾವರಿ ಯೋಜನೆಗಳ ಪೂರ್ಣಗೊಳಿಸಲು ಬಜೆಡ್ ನಲ್ಲಿ 19,171 ಕೋಟಿ ರೂ.ಗಳ ಅನುದಾನವನ್ನು ಜಲಸಂಪನ್ಮೂಲ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದು, ಮೇಕೆದಾಟು, ಎತ್ತಿನಹೊಳೆ, ನವಲಿ ಸಮಾನಾಂತರ ಜಲಾಶಯ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಅನುದಾನ ನೀಡಿದ್ದಾರೆ ಆದರೆ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಘೋಷಿತ ಅನುದಾನ ಬಿಡುಗಡೆಗೆ ಕೇಂದ್ರವನ್ನು ಒತ್ತಾಯಿಸುವ ಪ್ರಸ್ತಾಪ ಮಾಡಿದ್ದಾರೆ. ಒಟ್ಟಾರೆಯಾಗಿ ಜಲಸಂಪನ್ಮೂಲ ಇಲಾಖೆಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಏನೆಲ್ಲಾ ಸಿಕ್ಕಿದೆ ಎನ್ನುವ ಕುರಿತ ಮಾಹಿತಿ ಇಲ್ಲಿದೆ.
ತಮ್ಮ 15ನೇ ಬಜೆಟ್ ಮಂಡನೆಯಲ್ಲಿ ಸಿದ್ದರಾಮಯ್ಯ ಅವರು ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿಗೆ 970 ಕೋಟಿ ರೂ. ಅನುದಾನವನ್ನು ಘೋಷಿಸಿದ್ದಾರೆ. "ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ- ಕುಕನೂರು ತಾಲೂಕಿನ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಸಕ್ತ ವರ್ಷ 970 ಕೋಟಿ ವೆಚ್ಚದ ಅನುದಾನ ನೀಡಲಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಹಾಗೂ ಇತರ ಪ್ರದೇಶಗಳಿಗೆ ನಾರಾಯಣಪುರ ನಾಲೆಯಿಂದ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ 990 ಕೋಟಿ ಅನುದಾನ ಮೀಸಲಿಡಲಾಗಿದೆ" ಎಂದು ಅವರು ಘೋಷಣೆ ಮಾಡಿದ್ದಾರೆ.
ಕಾವೇರಿ ಕಣಿವೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಜಲಸಂಪನ್ಮೂಲ:ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯಡಿ ಮುಳುಗಡೆಯಾಗುವ ಭೂಮಿಯನ್ನು ಗುರುತಿಸುವ ಸರ್ವೆ ಹಾಗೂ ಮರಗಳ ಎಣಿಕೆ ಪ್ರಕ್ರಿಯೆಯನ್ನು ಚಾಲನೆಗೊಳಿಸಿದ್ದು, ಉಳಿದ ಅಗತ್ಯ ತೀರುವಳಿಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಪಡೆದು ಶೀಘ್ರವಾಗಿ ಪ್ರಾರಂಭಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಆರ್ಎಸ್ ಡ್ಯಾಂ ಬೃಂದಾವನ ಉದ್ಯಾನವನವನ್ನು ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವಾಗಿ ಉನ್ನತೀಕರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಧಾರವಾಡದಲ್ಲಿರುವ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯನ್ನು ಪ್ರಸಕ್ತ ಸಾಲಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವಾಟರ್ ಮ್ಯಾನೇಜ್ಮೆಂಟ್ ಆಗಿ ಅಭಿವೃದ್ಧಿಗೊಳಿಸಲಾಗುವುದು. ರಾಜ್ಯ ನೀರಾವರಿ ನಿಗಮದ ಅಡಿ ಏತ ನೀರಾವರಿ ಯೋಜನೆಗಳಾದ ಕಲಬುರಗಿಯ ಯಡಳ್ಳಿ ಹಾಗೂ ತೆರ್ನಳ್ಳಿ, ಉಡುಪಿ ಜಿಲ್ಲೆಯ ಸ್ವರ್ಣಹಾಗೂ ಸಿದ್ದಾಪುರ, ಬಾಗಲಕೋಟೆ ಜಿಲ್ಲೆಯ ಮೆಳ್ಳಿಗೇರಿ - ಹಲಗಲಿ ಮುಂತಾದವನ್ನು ಪ್ರಸಕ್ತ ಸಾಲಿನಲ್ಲಿ 7,280 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು. ಕೃಷ್ಣಾ ಜಲಭಾಗ್ಯದಡಿ ಏತ ನೀರಾವರಿ ಯೋಜನೆಗಳನ್ನು 3,779 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.