ಕಲಬುರಗಿ: ವಸತಿ ಶಾಲೆಯೊಂದರಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಸ್ಥಿತಿಗೆ ಕಾರಣನಾದ ಬಾಲಕಿ ಸಹೋದರ (ದೊಡ್ಡಪ್ಪನ ಮಗ) ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ವಸತಿ ಶಾಲೆಯ ಪ್ರಾಂಶುಪಾಲ ಮತ್ತು ನಿಲಯದ ಪಾಲಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಆಳಂದ ತಾಲೂಕಿನ ಗ್ರಾಮವೊಂದರ ಬಾಲಕಿ ಅಫಜಲಪುರ ತಾಲೂಕಿನ ವಸತಿ ಶಾಲೆಯೊಂದರಲ್ಲಿ ಇದ್ದುಕೊಂಡು ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ರಜೆ ಇದ್ದಾಗಲೆಲ್ಲಾ ತನ್ನ ಗ್ರಾಮಕ್ಕೆ ಬಂದು ಹೋಗುತ್ತಿದ್ದ ಬಾಲಕಿ ಆಕೆಯ ಸಹೋದರನನ್ನು ಭೇಟಿಯಾಗುತ್ತಿದ್ದಳು. ಈ ವೇಳೆ ಆತನ ಬಾಲಕಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದನು. ಬಾಲಕಿ ತೀವ್ರ ಹೊಟ್ಟೆನೋವಿನಿಂದ ಬಳಲಿದಾಗ ವಸತಿ ನಿಲಯದವರು ಪೋಷಕರನ್ನು ಕರೆಸಿ ಆಕೆಯನ್ನು ಕಳುಹಿಸಿಕೊಟ್ಟಿದ್ದರು.
ಪೋಷಕರು ಸೋಲಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತೋರಿಸಿದಾಗ ಸ್ಕ್ಯಾನಿಂಗ್ನಲ್ಲಿ ಆಕೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಡಿ.28 ರಂದು ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿಯ ಪರಿಸ್ಥಿತಿಗೆ ಕುಟುಂಬಸ್ಥರು ಕುಗ್ಗಿ ಹೋಗಿದ್ದಾರೆ. ಅದರಲ್ಲೂ ಮಗಳ ಗರ್ಭಧಾರಣೆಗೆ ಸೋಧರ ಸಂಬಂಧಿ, ವರಸೆಯಲ್ಲಿ ಬಾಲಕಿಗೆ ಅಣ್ಣ ಆಗಬೇಕಾದವನು ಕಾರಣ ಎನ್ನುವುದನ್ನು ತಿಳಿದು ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಇನ್ನು ಬಾಲಕಿಗೆ ಹೆರಿಗೆಯಾಗಿರುವ ಬಗ್ಗೆ ಸೋಲಾಪುರದ ಖಾಸಗಿ ಆಸ್ಪತ್ರೆಯವರು ನೀಡಿದ ಮಾಹಿತಿ ಮೇರೆಗೆ ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ದೊಡ್ಡಪ್ಪನ ಮಗನನ್ನು ಬಂಧಿಸಲಾಗಿದೆ. ಬಾಲಕಿ ಗರ್ಭಿಣಿಯಾದರೂ ಗಮನ ಹರಿಸದೇ ಕರ್ತವ್ಯ ಲೋಪ ಎಸಗಿದ ಆರೋಪದಡಿ ವಸತಿ ಶಾಲೆಯ ಪ್ರಾಂಶುಪಾಲ ಮಲಕಪ್ಪ ಬಿರಾದಾರ್ ಹಾಗೂ ನಿಲಯ ಪಾಲಕ ಜಾವೇದ್ ಪಟೇಲ್ ಇಬ್ಬರನ್ನು ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ.
ಪ್ರಾಂಶುಪಾಲ ಮತ್ತು ನಿಲಯ ಪಾಲಕ ಅಮಾನತಾಗಿರುವ ವಿಷಯ ತಿಳಿಯುತ್ತಲೇ ವಸತಿ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು. ಇಬ್ಬರೂ ಅಧಿಕಾರಿಗಳು ಒಳ್ಳೆಯವರಾಗಿದ್ದು, ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಕೂಡಲೇ ಇಬ್ಬರ ಅಮಾನತು ಆದೇಶ ಹಿಂಪಡೆಯುವಂತೆ ಪಟ್ಟು ಹಿಡಿದರು. ಮಕ್ಕಳ ಪ್ರತಿಭಟನೆ ಹಿನ್ನೆಲೆ ಸ್ಥಳಕ್ಕೆ ತಹಶೀಲ್ದಾರ್ ಸಂಜೀವ್ ಕುಮಾರ್ ದಾಸರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್ ನಾಯಕ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮನವರಿಗೆ ಮಾಡಿಕೊಡಲು ಯತ್ನಿಸಿದರು. ಮೇಲಧಿಕಾರಿಗಳು ಸ್ಥಳಕ್ಕೆ ಬರಬೇಕು ಬೇಡಿಕೆಗೆ ಸ್ಪಂದಿಸಬೇಕು ಅಲ್ಲಿವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಹಾಗೂ ಪರೀಕ್ಷೆಗೂ ಹಾಜರಾಗುವುದಿಲ್ಲ ಎಂದು ಮಕ್ಕಳೂ ಪಟ್ಟು ಹಿಡಿದರು. ಆಗ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ದೂರವಾಣಿ ಕರೆ ಮೂಲಕ ಮಾತನಾಡಿ, ಸೋಮವಾರ ಶಾಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಕೈಬಿಡಲಾಯಿತು.
ಇದನ್ನೂ ಓದಿ:ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್