ಹುಬ್ಬಳ್ಳಿ : ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗೆ ಧಾರವಾಡ ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಫಲಿತಾಂಶ ಸುಧಾರಣೆಗೆ ಮಿಶನ್ ವಿದ್ಯಾಕಾಶಿ ಯೋಜನೆ ಅಡಿಯಲ್ಲಿ ಈ ವರ್ಷ ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದರು.
ನಗರದಲ್ಲಿಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪಿಯುಸಿ ಪರೀಕ್ಷೆ ಬರೆಯುವ ಧಾರವಾಡ ಜಿಲ್ಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 27,830 ಇದ್ದು, ಬಾಲಕರು 13,100 ಹಾಗೂ ಬಾಲಕಿಯರು 14730, ಕಲಾ ವಿಭಾಗದಲ್ಲಿ 5413, ವಾಣಿಜ್ಯ ವಿಭಾಗದಲ್ಲಿ 8464 ಹಾಗೂ ವಿಜ್ಞಾನ ವಿಭಾಗದಲ್ಲಿ 13,958 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಒಟ್ಟು 173 ಕಾಲೇಜುಗಳಿದ್ದು, 41 ಪರೀಕ್ಷಾ ಕೇಂದ್ರಗಳಿವೆ.
ಇನ್ನು ಎಸ್.ಎಸ್.ಎಲ್.ಸಿ ಪರೀಕ್ಷೆಗೆ 28,666 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ 1437, ಪುನರಾವರ್ತಿತ ಬಾಹ್ಯ ಅಭ್ಯರ್ಥಿಗಳ ಸಂಖ್ಯೆ 135 ಇದ್ದು, ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 30,749 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಹೈಸ್ಕೂಲ್ ಗಳ ಸಂಖ್ಯೆ 447 ಇದ್ದು, 106 ಪರೀಕ್ಷೆ ಕೇಂದ್ರಗಳು ಇವೆ ಎಂದು ಡಿಸಿ ಮಾಹಿತಿ ನೀಡಿದರು.
ಫಲಿತಾಂಶ ಸುಧಾರಣೆಗೆ ವಿದ್ಯಾಕಾಶಿ : ಧಾರವಾಡ ಎರಡೂ ಪರೀಕ್ಷೆಗಳ ಫಲಿತಾಂಶದಲ್ಲಿ ಹಿಂದುಳಿಯುತ್ತಿರುವ ಹಿನ್ನೆಲೆಯಲ್ಲಿ ಫಲಿತಾಂಶ ಸುಧಾರಣೆಗೆ ಮಿಶನ್ ವಿದ್ಯಾಕಾಶಿ ಆರಂಭಿಸಲಾಗಿದೆ. ಜಿಲ್ಲೆಯ ಮಕ್ಕಳಲ್ಲಿ ವಿವಿಧ ರೀತಿಯ ತರಬೇತಿ, ಶಿಕ್ಷಣ ವ್ಯವಸ್ಥೆ ಮೂಲಕ ಶೈಕ್ಷಣಿಕ ಫಲಿತಾಂಶ ಸುಧಾರಿಸುವ ಗುರಿ ಹೊಂದಲಾಗಿದೆ. ಕಳೆದ ಒಂದು ವರ್ಷದಿಂದ ಈ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.