ಕರ್ನಾಟಕ

karnataka

ಉಡುಪಿಯಲ್ಲಿ ಆ. 1 ರಿಂದ ಸೆ. 1ರವರೆಗೆ ಶ್ರೀಕೃಷ್ಣ ಮಾಸೋತ್ಸವ: ಪುತ್ತಿಗೆ ಶ್ರೀ - Sri Krishna Masotsava

By ETV Bharat Karnataka Team

Published : Jul 30, 2024, 7:08 PM IST

Updated : Jul 30, 2024, 9:05 PM IST

ಈ ಬಾರಿ ಕೃಷ್ಣ ಜನ್ಮಾಷ್ಟಮಿಯನ್ನು ಎರಡು ದಿನಗಳಲ್ಲದೇ, ಒಂದು ತಿಂಗಳ ಕಾಲ ಶ್ರೀ ಕೃಷ್ಣ ಮಾಸೋತ್ಸವವವಾಗಿ ಆಚರಿಸಲು ಉಡುಪಿ ಕೃಷ್ಣ ಮಠ ನಿರ್ಧರಿಸಿದೆ.

Sri Krishna Masotsava from August 1 to September 1 in Udupi
ಉಡುಪಿಯಲ್ಲಿ ಆ. 1ರಿಂದ ಸೆ. 1ರವರೆಗೆ ಶ್ರೀಕೃಷ್ಣ ಮಾಸೋತ್ಸವ (ETV Bharat)

ಉಡುಪಿ:ಶ್ರೀ ಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿ ಕೇವಲ ಎರಡು ದಿನಗಳಲ್ಲದೇ ಆಗಸ್ಟ್​ 1 ರಿಂದ ಸೆಪ್ಟೆಂಬರ್​ 1ರವರೆಗೆ ಒಂದು ತಿಂಗಳ ಕಾಲ ಶ್ರೀ ಕೃಷ್ಣ ಲೀಲೋತ್ಸವವಾಗಿ ಸಾಂಪ್ರದಾಯಿಕ ಮತ್ತು ವೈಭವ ಪೂರ್ಣವಾಗಿ 'ಶ್ರೀ ಕೃಷ್ಣ ಮಾಸೋತ್ಸವ' ಎಂದು ವಿಶಿಷ್ಠ ರೀತಿಯಲ್ಲಿ ಆಚರಿಸಲು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನಿರ್ಧರಿಸಿದ್ದಾರೆ.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ (ETV Bharat)

ಶ್ರೀ ಕೃಷ್ಣಮಠದ ಕನಕ ಮಂಟಪದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುತ್ತಿಗೆ ಶ್ರೀಗಳು, "ಶ್ರೀ ಕೃಷ್ಣನು ಅವತರಿಸಿದ ದಿನವನ್ನು ಕೃಷ್ಣಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಸುವ ದೃಷ್ಟಿಯಿಂದ ಸಮಿತಿ ರಚಿಸಲಾಗಿದೆ. ಆ. 1ರಂದು ಗುರುಗಳಾದ ಶ್ರೀಸುಜ್ಞಾನೇಂದ್ರ ತೀರ್ಥರ ಸಂಸ್ಮರಣೆಯೊಂದಿಗೆ ಶ್ರೀ ಕೃಷ್ಣಮಾಸೋತ್ಸವ ಆರಂಭವಾಗಲಿದೆ. ಪ್ರತಿ ದಿನವೂ ವಿವಿಧ ಕಾರ್ಯಕ್ರಮಗಳಾದ ರಂಗೋಲಿ ಸ್ಪರ್ಧೆ, ಮುದ್ದುಕೃಷ್ಣ, ಸೇರಿದಂತೆ ವಿವಿಧ ಸ್ಪರ್ಧೆಗಳು ಇರಲಿವೆ" ಎಂದು ತಿಳಿಸಿದರು.

ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಾಲ್ಕು ಉತ್ಸವ: "ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಲಡ್ದೋತ್ಸವ, ಸಾಮೂಹಿಕ ಡೋಲೋತ್ಸವ, ಕ್ರೀಡೋತ್ಸವ ಹಾಗೂ ಗೀತೋತ್ಸವ ನಡೆಯಲಿದೆ. ಕೃಷ್ಣಜನ್ಮಾಷ್ಟಮಿ ಎಂದರೆ ಲಡ್ಡು ಉಂಡಿ, ಚಕ್ಕುಲಿಗಳು ಪ್ರಮುಖವಾಗಿರುತ್ತವೆ. ಲಡ್ಡು ಮಾಡಲು ಉತ್ತೇಜನ ನೀಡುವುದು ಮತ್ತು 108 ಬಗೆಯ ಲಡ್ಡುಗಳನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಲಾಗುವುದು. ಡೋಲೋತ್ಸವದಲ್ಲಿ ತೊಟ್ಟಿಲೋತ್ಸವ ಇತ್ಯಾದಿಗಳು ವೈಭವದಿಂದ ನಡೆಯಲಿವೆ. ಕ್ರೀಡೋತ್ಸವದಲ್ಲಿ ಜನಪದ ಕ್ರೀಡೆಗಳು, ಹುಲಿಕುಣಿತ, ವಿವಿಧ ಸ್ಪರ್ಧೆಗಳು ನಡೆಯಲಿವೆ. ಗೀತೋತ್ಸವದಲ್ಲಿ ಭಗವದ್ಗೀತೆಯ ಪಠನ ಸಹಿತವಾಗಿ ಕೋಟಿಗೀತ ಲೇಖನ ಯಜ್ಞ, ಭಗವದ್ಗೀತೆ ಸಾಮೂಹಿಕ ಗಾಯನ ಇತ್ಯಾದಿ ನಿರಂತರವಾಗಿ ನಡೆಯಲಿವೆ." ಎಂದರು.

ರಾಷ್ಟ್ರೀಯ ಹಬ್ಬದಂತೆ ಆಚರಣೆ:ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಶ್ರೀ ಕೃಷ್ಣಮಠದಲ್ಲಿ ಒಂದು ತಿಂಗಳು ನಿರಂತರ ಕಾರ್ಯಕ್ರಮ. ರಾಜಾಂಗಣ ಹಾಗೂ ಗೀತಾ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ರಾಜಾಂಗಣದಲ್ಲಿ ಶ್ರೀ ಕೃಷ್ಣಮಾಸೋತ್ಸವ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠಾಧೀಶ ಶ್ರೀ ವಿದ್ವೇಶತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿದೆ" ಎಂದು ಪುತ್ತಿಗೆ ಶ್ರೀ ಹೇಳಿದರು.

ಇದನ್ನೂ ಓದಿ:ಅಲಿ ದೇವರ ಜೊತೆಗೆ ಕೆಂಡ ತುಳಿದ ಆಂಜನೇಯ ಸ್ವಾಮಿ; ಮೊಹರಂ ಹಬ್ಬಕ್ಕೆ ತೆರೆ - Muharram festival

Last Updated : Jul 30, 2024, 9:05 PM IST

ABOUT THE AUTHOR

...view details