ದಾವಣಗೆರೆ :ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸಿದರೆ ಮಾತ್ರ ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳಿಗೆ ಬೆಲೆ ಎಂದು ಹೋರಾಟಗಾರ ಎಸ್ ಆರ್ ಹಿರೇಮಠ ಅವರು ತಿಳಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆ ಸಾಮಾನ್ಯವಾಗಿಲ್ಲ. ಈ ಬಿಜೆಪಿ ಎನ್ಡಿಎ ಸರ್ಕಾರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳಿಗೆ ಹೀನಾಯವಾಗಿ ನಾವು 1977ರಲ್ಲಿ ಮಾಡಿದಂತೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳಿಗೆ ಬೆಲೆ ಸಿಕ್ಕಂತೆ ಆಗುತ್ತೆ. ಇವರನ್ನು ಸೋಲಿಸಬೇಕು ಎಂದು ಕರೆ ನೀಡಿದರು.
ಶತಮಾನಗಳಿಂದ ನಮ್ಮ ಶರಣರು, ಸಂತರು, ಸೂಫಿ ಸಂತರು ನಮ್ಮೊಳಗೆ ಭಾವೈಕ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಅದನ್ನು ಉಳಿಸುವುದು ಮಾತ್ರವಲ್ಲ. ದುಡಿಯುವ ಜನರಿಗೆ ಗೌರವಯುತ ಜೀವನ ಅನ್ನುವುದು ನಮ್ಮ ಸ್ವಾತಂತ್ರ್ಯ ಹೋರಾಟದ ಅತ್ಯುನ್ನತ ಮಹತ್ವದ ಗುರಿಯಾಗಿತ್ತು. ಅದನ್ನು ಸಾಧಿಸಲಿಕ್ಕೆ ಇದು ಬಹಳ ಮಾರಕವಾಗಿದೆ. ಹೀಗಾಗಿ ಇವರನ್ನು ಸೋಲಿಸಬೇಕು. ಎರಡು ಕೋಟಿ ಉದ್ಯೋಗ ಕೊಡ್ತೇವಿ ಎಂದರೂ ಕೊಡಲಿಲ್ಲ. ಯಾವ ರಾಜ್ಯದಲ್ಲಿ ಅವರು ಸಿಎಂ ಆಗಿ ಪಿಎಂ ಆದ್ರೋ ಅಲ್ಲೇ ಯುವಕರು ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಇವತ್ತು ಈ ಕೊರೊನಾ ಬಂದಾಗ ವಲಸೆ ಕಾರ್ಮಿಕರ ಪರಿಸ್ಥಿತಿ ಏನಾಯ್ತು ಎಂಬುದನ್ನ ನಾವೆಲ್ಲ ನೋಡಿದ್ದೇವೆ. ಮಾಧ್ಯಮದವರು ಟಿವಿಯಲ್ಲಿ ತೋರಿಸಿದ್ದೀರಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಮುಸ್ಲಿಮರನ್ನು ಟಾರ್ಗೆಟ್ ಮಾಡ್ತಿದ್ದಾರೆ. ಮಣಿಪುರದಲ್ಲಿ 100 ಚರ್ಚ್ಗಳನ್ನು ಕೆಡವಿದ್ದಾರೆ. ಇಷ್ಟಾದ್ರೂ ಪ್ರಧಾನ ಮಂತ್ರಿಯವರು ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಇಂತಹ ಸರ್ಕಾರ ಪ್ರಜಾಪ್ರಭುತ್ವದಲ್ಲಿ ಇರಬಾರದು. ಹಿಟ್ಲರ್ ಇದೇ ರೀತಿ ಮಾಡಿದವ. ಹಿಂದೂ ಗೌರವ ಇರಲಿ. ಆದ್ರೆ ಬೇರೆ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂದು ಹೇಳಿದರು.
ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಬಿಜೆಪಿ ಹಾಗೂ ಎನ್ಡಿಎ ಕೂಟವನ್ನು ಸೋಲಿಸಬೇಕಾಗಿದೆ. ವರ್ಷಕ್ಕೆ ಎರಡು ಕೋಟಿ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹಾಕಿ 1977ರ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡರು. 2024ರಲ್ಲಿ ಹಿಟ್ಲರ್ ರೀತಿಯಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿಯನ್ನ ಕಿತ್ತು ಹಾಕಿದ್ರೆ ದೇಶಕ್ಕೆ ಭವಿಷ್ಯವಿದೆ ಎಂದು ಎಸ್. ಆರ್ ಹಿರೇಮಠ ಅವರು ಸಂದೇಶ ರವಾನಿಸಿದ್ರು.
ಇದನ್ನೂ ಓದಿ :ಕರ್ನಾಟಕ ಮತ್ತು ಆಂಧ್ರ ಗಡಿಯ 2 ಕಿ.ಮೀ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲು ಹೋರಾಟ