ಬೆಂಗಳೂರು: ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಶರವೇಗದಲ್ಲಿ ಸಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 13 ಜನರನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಇಂದು ಮೂವರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ರೇಣುಕಾಸ್ವಾಮಿ ಮೃತದೇಹವನ್ನು ಬಿಸಾಡಿದ್ದ ಸ್ಥಳಕ್ಕೆ ಮೂವರು ಆರೋಪಿಗಳನ್ನು ಪೊಲೀಸರು ಕರೆದೊಯ್ದರು. ಈ ವೇಳೆ, ಶವ ಬಿಸಾಕಿರುವ ಸ್ಥಳವನ್ನು ಆರೋಪಿಗಳು ಪೊಲೀಸರಿಗೆ ತೋರಿಸಿದ್ದಾರೆ.
ಆರೋಪಿಗಳಾದ ಕಾರ್ತಿಕ್, ನಿಖಿಲ್ ಹಾಗೂ ರಾಘವೇಂದ್ರ ಅವರನ್ನು ಇಂದು ಮಧ್ಯಾಹ್ನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಕರೆತಂದರು. ಶವ ಬಿಸಾಕಿದ್ದ ಜಾಗವನ್ನು ಆರೋಪಿಗಳು ತೋರಿಸಿದರು. ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಸಂಗ್ರಹಿಸಿ ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದರು.
ಹಲ್ಲೆ ಬಳಿಕ ಹತ್ಯೆ ಮಾಡಲಾಗಿದ್ದ ಪಟ್ಟಣಗೆರೆಯ ಶೆಡ್ಗೆ ಸಂಜೆಯೊಳಗೆ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಕರೆತಂದು, ಸ್ಥಳ ಮಹಜರಿಗೆ ಒಳಪಡಿಸಲಿದ್ದಾರೆ. ಶೆಡ್ನಲ್ಲಿ ಎಷ್ಟು ಮಂದಿಯಿದ್ದರು. ಹಲ್ಲೆ ಮಾಡುವಾಗ ಹಾಗೂ ಹತ್ಯೆ ಬಳಿಕ ಯಾರೆಲ್ಲಾ ಸ್ಥಳದಲ್ಲಿದ್ದರು ಹಾಗೂ ಹಲ್ಲೆ ಮಾಡಲು ಬಳಸಿದ ವಸ್ತುಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಲಿದ್ದಾರೆ. ಒಂದು ವೇಳೆ ಹಲ್ಲೆಗೆ ಬಳಸಿದ್ದ ವಸ್ತುಗಳನ್ನು ಎಲ್ಲಾದರೂ ಎಸೆದಿದ್ದರೆ, ಅದರ ಜಾಗವನ್ನೂ ಹುಡುಕಿ ವಸ್ತುಗಳನ್ನು ವಶಪಡಿಸಿಕೊಳ್ಳಲಿದ್ದಾರೆ. ನಿನ್ನೆಯಷ್ಟೇ ಪಟ್ಟಣಗೆರೆ ಗೋದಾಮಿನಲ್ಲಿ ಎಫ್ಎಸ್ಎಲ್ ತಂಡ ಸಾಕ್ಷ್ಯ ಸಂಗ್ರಹಿಸಿತ್ತು. ಇಂದು ಸಹ ಸ್ಥಳಕ್ಕೆ ಬಂದ ತಂಡವು ಸಿಗಬಹುದಾದ ಸಾಕ್ಷ್ಯಗಳನ್ನು ಕಲೆಹಾಕುವಲ್ಲಿ ನಿರತವಾಗಿದೆ.