ಬೆಂಗಳೂರು:ಕೌನ್ಸಿಲ್ ಆಫ್ ಸೈಂಟಿಫಿಕ್ ಇಂಡಸ್ಟ್ರೀಯಲ್ ರಿಸರ್ಚ್ (ಸಿಎಸ್ಐಆರ್) ಸಂಸ್ಥೆಯ ಸ್ಟ್ರಕ್ಚರಲ್ ಇಂಜಿನಿಯರಿಂಗ್ ಸೆಂಟರ್ ವತಿಯಿಂದ 'ಮದ್ದುಗುಂಡು ನಿರೋಧಕ ಭದ್ರತೆ ಬೂತ್' (ಬುಲೆಟ್ ರೆಸಿಸ್ಟೆಂಟ್ ಸೆಕ್ಯೂರಿಟಿ ಬೂತ್) ಆವಿಷ್ಕರಿಸಲಾಗಿದೆ. ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಪಹರೆ ಕಾಯುವ ಭಾರತೀಯ ಯೋಧರ ರಕ್ಷಣೆಯ ಪ್ರಮುಖ ಅಸ್ತ್ರವಾಗಿ ಇದು ಕಾರ್ಯನಿರ್ವಹಿಸಲಿದೆ.
ಸರ್ಕಾರಿ ಸ್ವಾಮ್ಯದ ಚೆನ್ನೈನ ಸಿಎಸ್ಐಆರ್ ಸಂಸ್ಥೆಯು ಮೊದಲ ಬಾರಿಗೆ ಬುಲೆಟ್ ರೆಸಿಸ್ಟೆಂಟ್ ಸೆಕ್ಯೂರಿಟಿ ಬೂತ್ ಅಭಿವೃದ್ಧಿಪಡಿಸಿದ್ದು, ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಶತ್ರು ರಾಷ್ಟ್ರಗಳ ಮೇಲೆ ಕಣ್ಣಿಡುವ ಹಾಗೂ ಹಗಲು ರಾತ್ರಿ ಎನ್ನದೇ ನಿರಂತರ ಕಾವಲು ಕಾಯುವ ಸೈನಿಕರಿಗೆ ಆಗಬಹುದಾದ ಪ್ರಾಣಹಾನಿ ತಪ್ಪಿಸಲು ಸೆಕ್ಯೂರಿಟಿ ಬೂತ್ ನೆರವಿಗೆ ಬರಲಿದೆ.
ರಕ್ಷಣಾ ಕಾರ್ಯತಂತ್ರದ ಭಾಗವಾಗಿ ಭಾರತೀಯ ಸೇನಾಪಡೆಗಳು, ಸಶಸ್ತ್ರ ಮೀಸಲು ಪಡೆ, ಗಡಿ ಭದ್ರತಾ ಪಡೆ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಇನ್ನಿತರ ಸೇನಾ ತುಕಡಿಗಳಿಗೆ ಸೆಕ್ಯೂರಿಟಿ ಬೂತ್ ಸಹಕಾರಿಯಾಗಲಿದೆ. ಎದುರಾಳಿ ಪಡೆ ಹಾಗೂ ದೇಶದ ಸುರಕ್ಷತೆಗೆ ಧಕ್ಕೆ ತರುವವರ ಮೇಲೆ ನಿಗಾವಹಿಸಲು ಇಷ್ಟು ವರ್ಷಗಳ ಕಾಲ ಸಾಂಪ್ರದಾಯಿಕ ಮರಳಿನ ಚೀಲಗಳನ್ನು ಜೋಡಿಸಿ ಅದರ ಮರೆಯಲ್ಲಿ ಕುಳಿತು ಭದ್ರತಾ ಪಡೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಕ್ಲಿಷ್ಟಕರ ವಾತಾವರಣದಲ್ಲಿ ಏಕಾಏಕಿ ಶತ್ರುಗಳು ದಾಳಿ ನಡೆಸಿದಾಗ ಪ್ರತಿರೋಧ ತೋರುವ ಸಂದರ್ಭದಲ್ಲಿ ಯೋಧರ ಸಾವು-ನೋವುಗಳು ಸಂಭವಿಸುತ್ತಿತ್ತು. ಹೀಗಾಗಿ ಯೋಧರ ಅಮೂಲ್ಯ ಜೀವ ಉಳಿಸಿ ಅವರ ರಕ್ಷಣೆ ಕಲ್ಪಿಸಲು ಸೆಕ್ಯೂರಿಟಿ ಬೂತ್ ಪರಿಣಾಮಕಾರಿಯಾಗಲಿದೆ.