ಶೃಂಗೇರಿಯ ಶ್ರೀ ಮಠದಲ್ಲಿ ರಾಮ ಮಂತ್ರ ಜಪ ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಶೃಂಗೇರಿಯ ಶ್ರೀ ಮಠದಲ್ಲಿ ರಾಮ ಮಂತ್ರ ಜಪ ನೆರವೇರಿಸಲಾಯಿತು. ಕಿರಿಯ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ರಾಮಮಂತ್ರ ಜಪ ಉಪದೇಶ ನಡೆದಿದ್ದು, 108 ಬಾರಿ ರಾಮ ಮಂತ್ರವನ್ನು ಭಕ್ತರು ಪಠಿಸಿದರು.
ಶ್ರೀಮಠದ ಕೋದಂಡ ರಾಮಚಂದ್ರ ಸ್ವಾಮಿ ಸನ್ನಿಧಿಯಲ್ಲಿ ರಾಮಮಂತ್ರ ಜಪ ನಡೆದಿದ್ದು, ಭಾನುವಾರದಿಂದಲೇ ಮಠದ ಆವರಣದಲ್ಲಿ ಅಯೋಧ್ಯೆ ರಾಮಮಂದಿರದ ಕಲಾ ಕೃತಿಯನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿದೆ. ಈ ಕಲಾಕೃತಿಯನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದಾರೆ.
ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅನ್ನಪೂರ್ಣೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ : ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧಿಯಾದ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ, ತಾರಕ ಹೋಮ ನೆರವೇರಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ವಿಶೇಷ ಪೂಜೆ, ಹೋಮದಲ್ಲಿ ಭಾಗಿಯಾದರು.
ಈ ವೇಳೆ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅವರು ಮಾತನಾಡಿ, ಪ್ರಭು ಶ್ರೀರಾಮ ಪ್ರಪಂಚಕ್ಕೆ ತನ್ನ ಆದರ್ಶ ತೋರಿಸಿ ಕೊಟ್ಟಿದ್ದಾನೆ. ಶ್ರೀರಾಮ ತೆರೆದಿಟ್ಟ ಪುಸ್ತಕವಿದ್ದಂತೆ, ಶ್ರೀರಾಮ ಮರ್ಯಾದ ಪುರುಷೋತ್ತಮ ಎಂಬ ಹೆಸರನ್ನು ಪಡೆದುಕೊಂಡಿದ್ದಾನೆ. ಸೂರ್ಯ ಚಂದ್ರ ಇರುವವರೆಗೂ ಆತನ ಬದುಕು ಆದರ್ಶವಾಗಿದ್ದು, ಅಯೋಧ್ಯೆಯ ನೂತನ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ.
ಪ್ರತಿಯೊಬ್ಬರೂ ಶ್ರೀ ರಾಮನ ಅನುಗ್ರಹಕ್ಕೆ ಪಾತ್ರರಾಗಿ. ನಮ್ಮ ಅಂತರಂಗದಲ್ಲಿ ರಾಮ ಸ್ಥಿರವಾಗಿ, ಶಾಶ್ವತವಾಗಿ ನೆಲೆಯೂರಿದ್ದಾನೆ. ಪ್ರತಿಯೊಬ್ಬನು ರಾಮನಾಗಿ ಪರಿವರ್ತನೆಯಾಗಬೇಕು. ಭಾರತೀಯ ಸನಾತನ ಧರ್ಮಕ್ಕೆ ನಾವು ಸಮರ್ಪಣೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ:ಚಿಕ್ಕಮಗಳೂರು: ಶಾರದಾಮಠದಲ್ಲಿ ಗಮನ ಸೆಳೆದ ಅಯೋಧ್ಯೆ ರಾಮಮಂದಿರ ಪ್ರತಿಕೃತಿ