ಬೆಂಗಳೂರು: ನಗರದಲ್ಲಿ ನಾಡಹಬ್ಬ ದಸರಾ ಆಚರಣೆಗಳು ಪಾರಂಭವಾಗಿದ್ದು, ಮನೆಗಳು, ಸಂಘ-ಸಂಸ್ಥೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಸಂಭ್ರಮಿಸಲಾಗುತ್ತಿದೆ. ಮುಖ್ಯವಾಗಿ ನಗರದ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನ ಹಾಗೂ ಅಂದ್ರಹಳ್ಳಿಯ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದ ಗೊಂಬೆಗಳ ಪ್ರದರ್ಶನವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತೀಯ ವಿದ್ಯಾಭವನದಲ್ಲಿ ಪರಂಪರೆ ಹಾಗೂ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಹಲವಾರು ವರ್ಷಗಳಿಂದ ನಾಡಹಬ್ಬ ದಸರಾದಂದು ವಿವಿಧ ತರದ ಬೊಂಬೆಗಳನ್ನು ಕೂರಿಸುತ್ತ ಬರಲಾಗುತ್ತಿದೆ. ಅದರಂತೆ, ಈ ಬಾರಿ ಶ್ರೀರಾಮ ಕಥಾ ದರ್ಶನ ಎನ್ನುವ ವಿಷಯವನ್ನಿಟ್ಟುಕೊಂಡು ಬೊಂಬೆಗಳನ್ನಿಟ್ಟಿದ್ದಾರೆ.
ದಸರಾ ಗೊಂಬೆಗಳ ಪ್ರದರ್ಶನ (ETV Bharat) ಪ್ರದರ್ಶನದಲ್ಲಿ ಮುಖ್ಯವಾಗಿ, ರಾಮನ ಬಾಲ ಕಾಂಡ, ಪುತ್ರಕಾಮೆಷ್ಠಿ ಯಾಗ, ರಾಮನ ಜನನ, ಋಷಿ ವಿಶ್ವಾಮಿತ್ರರ ಅಯೋಧ್ಯೆಯ ಭೇಟಿ, ತಾಟಕಾ ರಾಕ್ಷಸನನ್ನು ಕೊಂದ ರಾಮ-ಲಕ್ಷ್ಮಣ, ರಾಮ-ಸೀತೆಯ ದೈವಿಕ ಮದುವೆ, ಅಯೋಧ್ಯೆಯ ಕಾಂಡ, ಅರಣ್ಯ ಕಾಂಡ, ಕಿಷ್ಕಿಂದ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡ ಹಾಗೂ ಉತ್ತರ ಕಾಂಡ ಎಂಬ ವಿಭಾಗಗಳನ್ನು ಮಾಡಿ ಗೊಂಬೆಗಳ ಮೂಲಕ ಇಡೀ ಕಥೆಯನ್ನು ವಿವರಿಸಲಾಗಿದೆ.
ಅಪರ್ಣಾ ಆಚಾರ್ಯ ಮತ್ತು ಶ್ರೀನಾಥ ಆಚಾರ್ಯ ದಂಪತಿ ಶ್ರೀರಾಮ ಕಥಾ ದರ್ಶನದ ರೂವಾರಿಗಳಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ತಮ್ಮ ಮನೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಗೊಂಬೆ ಪ್ರದರ್ಶನವನ್ನು ಏರ್ಪಡಿಸಿಕೊಂಡು ಬರುತ್ತಿದ್ದಾರೆ. ಯುವ ಜನಾಂಗಕ್ಕೆ ಮಾಹಿತಿ ನೀಡಲು ಚತುಷಷ್ಠಿ ಕಲೆ, ಗಂಗಾವತರಣ, ಸಂವತ್ಸರ ಸಂಭ್ರಮ, ನವರಾತ್ರಿ ಮಹತ್ವ ಅವರ ಗಮನ ಸೆಳೆದ ಪ್ರದರ್ಶನಗಳಾಗಿವೆ.
ಭಾರತೀಯ ವಿದ್ಯಾಭವನದಲ್ಲಿ ಆಗಸ್ಟ್ 12ರವರೆಗೆ ಆಯೋಜಿಸಲಾಗಿರುವ ಈ ನವರಾತ್ರಿ 2024ರ ಗೊಂಬೆ ಪ್ರದರ್ಶವು ಪ್ರತಿ ದಿನ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರ ವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ.
ದಸರಾ ಗೊಂಬೆಗಳ ಪ್ರದರ್ಶನ (ETV Bharat) ರಾಮಾಯಣ, ಮಹಾಭಾರತದ ಕಥೆ ಹೇಳುವ ದಸರಾ ಗೊಂಬೆಗಳ ಅಲಂಕಾರಿಕ ಚಿತ್ರಣ:ಮತ್ತೊಂದೆಡೆ, ತಿರುಪತಿಯ ಏಳು ಬೆಟ್ಟಗಳು, ಹಂಪಿ ಉತ್ಸವದ ಚಿತ್ರಣ, ಸುಂದರ ಸೊಬಗಿನ ಹಳ್ಳಿಯ ಚಿತ್ರಣ, ರಾಮಾಯಣ ಮತ್ತು ಮಹಾಭಾರತ ಕಥೆ ಹೇಳುವ ಗೊಂಬೆಗಳ ಅಲಂಕಾರಿಕ ಚಿತ್ರಣ, ದಸರಾ ಉತ್ಸವ ಇವೆಲ್ಲವೂ ದಸರಾ ಹಬ್ಬದ ಪ್ರಯುಕ್ತ ಅಂದ್ರಹಳ್ಳಿಯ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದ ಶಾಲೆಯ ಮಕ್ಕಳಿಂದ ಗೊಂಬೆಗಳ ರೀತಿಯಲ್ಲಿ ಅನಾವರಣಗೊಂಡಿವೆ.
ಮಹಾಭಾರತದಲ್ಲಿ ಶ್ರೀ ಕೃಷ್ಣನ ಜನನದಿಂದ ಪ್ರಾರಂಭವಾಗಿ ಶಿವಲಿಂಗ ಮರ್ದನ, ಬಕಾಸುರನ ವಧೆ, ಕಂಸ ವಧೆ, ಶ್ರೀ ಕೃಷ್ಣನ ಲೀಲೆ, ಬೃಂದಾವನ, ಶ್ರೀ ಕೃಷ್ಣ ಸುಧಾಮ, ದ್ರೌಪದಿಯ ಸ್ವಯಂವರ, ಗೀತಾ ಉಪದೇಶ, ದುರ್ಯೋಧನನ ಸಂಹಾರ ಇನ್ನೂ ಮುಂತಾದ ಕಥೆ ಹೇಳುವ ಗೊಂಬೆಗಳಿಂದ ಕ್ರಮಬದ್ಧವಾಗಿ ಅಲಂಕೃತವಾಗಿ ಅನಾವರಣಗೊಳಿಸಲಾಗಿದೆ.
ದಸರಾ ಗೊಂಬೆಗಳ ಪ್ರದರ್ಶನ (ETV Bharat) ರಾಮಾಯಣದ 7 ಕಾಂಡಗಳ ಚಿತ್ರಣದಲ್ಲಿ ಶ್ರೀ ರಾಮನ ಜನನದಿಂದ ಪ್ರಾರಂಭವಾಗಿ ಬಾಲ್ಯ, ತಾಟಕಿಯ ಸಂಹಾರ, ಸೀತಾ ಸ್ವಯಂವರ, ಶಿವ ಧನಸ್ಸು, ವನವಾಸ, ಸಂಜೀವಿನಿ ಪರ್ವತ, ಭರತ ಶ್ರೀರಾಮನ ಪಾದಕ್ಕೆ ಸ್ವೀಕಾರ, ಲಕ್ಷ್ಮಣ ರೇಖೆ, ಸೀತಾಪಹರಣ, ಶ್ರೀರಾಮ ಸೇತು ನಿರ್ಮಾಣ, ಹನುಮಂತ ಲಂಕೆ ದಹನ, ರಾವಣ ಸಂಹಾರ, ಶ್ರೀ ರಾಮನ ಪಟ್ಟಾಭಿಷೇಕದಿಂದ ಅಶ್ವಮೇಧಯಾಗದವರೆಗೂ ಗೊಂಬೆಗಳಿಂದ ಸಂಪೂರ್ಣ ರಾಮಾಯಣದ ಕಥೆ ಹೇಳಲಾಗಿದೆ.
''ನಮ್ಮ ಸಂಪ್ರದಾಯ, ಸಂಸ್ಕೃತಿ ಮರೆಯಾಗಬಾರದು. ರಾಮಾಯಣ, ಮಹಾಭಾರತದಲ್ಲಿ ಬರುವಂತಹ ಸಂದೇಶ, ನೀತಿ, ಧರ್ಮ ರಕ್ಷಣೆ, ಉಪದೇಶವನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ದಸರಾ ಗೊಂಬೆಗಳಿಂದ ವಿಶೇಷವಾಗಿ ಅಲಂಕರಿಸಿ ಗುರುಗಳ ಮಾರ್ಗದರ್ಶನದಲ್ಲಿ ಮೂಡಿಬಂದಿದೆ. ಮಕ್ಕಳ ಈ ಪ್ರತಿಭೆ ನಿಜಕ್ಕೂ ಅಚ್ಚರಿಯಾಗಿದೆ. ಈ ಪ್ರದರ್ಶನವನ್ನು ನವರಾತ್ರಿ ಮುಗಿಯುವವರೆಗೂ ಪೋಷಕರು ಮತ್ತು ಸಾರ್ವಜನಿಕರಿಗೆ ನೋಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ'' ಎಂದು ಶಾಲೆಯ ಕಾರ್ಯದರ್ಶಿ ಭರತ್ ಸೌಂದರ್ಯ ತಿಳಿಸಿದ್ದಾರೆ.
ಓದಿ:ಮೈಸೂರು ದಸರಾ: ಹೊರರಾಜ್ಯದ ವಾಹನಗಳಿಗೆ ತೆರಿಗೆ ವಿನಾಯಿತಿ - Tax Exemption