ಕರ್ನಾಟಕ

karnataka

ETV Bharat / state

ಅಧಿವೇಶನದಲ್ಲಿ ಭೋಜನದ ಬಳಿಕ ಶಾಸಕರಿಗೆ ನಿದ್ರೆ ಭಾಗ್ಯ: 15 ರಿಕ್ಲೈನರ್ ಕುರ್ಚಿ ಬಾಡಿಗೆ ಪಡೆಯಲು ಮುಂದಾದ ಸ್ಪೀಕರ್ - RECLINER CHAIRS FOR MLAS

ಜಂಟಿ ಅಧಿವೇಶನದಲ್ಲಿ ಮಧ್ಯಾಹ್ನದ ಭೋಜನದ ಬಳಿಕ ನಿದ್ರೆ ಮಾಡುವ ಶಾಸಕರ ಅನುಕೂಲಕ್ಕಾಗಿ ರಿಕ್ಲೈನರ್ ಕುರ್ಚಿಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದೆ.

speaker-u-t-khader-plan-to-get-rent-recliner-chairs-for-mlas-who-sleep-after-dinner-during-session
ಸ್ಪೀಕರ್ ಯು.ಟಿ.ಖಾದರ್ (ETV Bharat)

By ETV Bharat Karnataka Team

Published : Feb 24, 2025, 6:05 PM IST

ಬೆಂಗಳೂರು:ವಿಧಾನಸೌಧದಲ್ಲಿ ಮಧ್ಯಾಹ್ನ‌ ಭೋಜನದ ಬಳಿಕ ಕಿರು ನಿದ್ರೆ ಮಾಡುವ ಶಾಸಕರಿಗೆ ಈ ಬಾರಿ ರಿಕ್ಲೈನರ್ ಚೇರ್ ವ್ಯವಸ್ಥೆ ಕಲ್ಪಿಸಲು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮುಂದಾಗಿದ್ದಾರೆ.

ಕಲಾಪದಲ್ಲಿ ಶಾಸಕರ ಹಾಜರಾತಿ ಹೆಚ್ಚಳಕ್ಕೆ ಹಾಗೂ ಬೆಳಗ್ಗೆ ಬೇಗ ಕಲಾಪಕ್ಕೆ ಆಗಮಿಸಲು ಅನುವಾಗುವಂತೆ ಸ್ಪೀಕರ್ ಖಾದರ್ ಶಾಸಕರಿಗೆ ವಿಧಾನಸೌಧದಲ್ಲೇ ಉಚಿತವಾಗಿ ಬೆಳಗ್ಗೆ 9 ಗಂಟೆಗೆ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಿದ್ದಾರೆ. ಆ ಮೂಲಕ ಶಾಸಕರು ಹೊರಗಡೆ ಉಪಹಾರ ಮಾಡಿ ಕಲಾಪಕ್ಕೆ ತಡವಾಗಿ ಬರುವುದನ್ನು ತಪ್ಪಿಸಲು ಹಾಗೂ ಮಧ್ಯಾಹ್ನ ಭೋಜನಕ್ಕೆ ಹೊರಗಡೆ ಹೋಗಿ ಬಳಿಕ ಕಲಾಪಕ್ಕೆ ಗೈರಾಗುವುದನ್ನು ತಪ್ಪಿಸಲು ಕ್ರಮ ವಹಿಸಿದ್ದಾರೆ. ಈ ಪರಿಪಾಠವನ್ನು ಕಳೆದ ಎರಡು ಮೂರು ಅಧಿವೇಶನಗಳಿಂದಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ವಿಧಾನಸಭೆ ಮೊಗಸಾಲೆಯಲ್ಲೇ ರಿಕ್ಲೈನರ್ ಚೇರ್:ಶಾಸಕರು ಭೋಜನದ ಬಳಿಕ ನಿದ್ರೆ ಮಾಡಲು ಹೊರಗೆ ಹೋಗುವುದನ್ನು ತಪ್ಪಿಸಲು ವಿಶ್ರಾಂತಿಗಾಗಿ ವಿಧಾನಸಭೆಯ ಮೊಗಸಾಲೆಯಲ್ಲೇ ರಿಕ್ಲೈನರ್ ಚೇರ್​​ಗಳ ವ್ಯವಸ್ಥೆ ಕಲ್ಪಿಸಲು ಸ್ಪೀಕರ್ ಖಾದರ್ ತೀರ್ಮಾನಿಸಿದ್ದಾರೆ. ಜಂಟಿ ಹಾಗೂ ಬಜೆಟ್ ಅಧಿವೇಶನದಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಶಾಸಕರು ಕಿರು ನಿದ್ರೆಗೆ ಜಾರಲು ಸುಮಾರು 15 ರಿಕ್ಲೈನರ್ ಚೇರ್​​​ಗಳನ್ನು ಬಾಡಿಗೆಗೆ ತರಲು ಚಿಂತಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.

ಇದನ್ನೂ ಓದಿ:ಗ್ರೇಟರ್ ಬೆಂಗಳೂರು ಮಸೂದೆ ವರದಿ ಸಲ್ಲಿಕೆ : 7 ಪಾಲಿಕೆ ರಚನೆ, 30 ತಿಂಗಳ ಮೇಯರ್ ಅವಧಿಗೆ ಸಲಹೆ

"ರಿಕ್ಲೈನರ್ ಚೇರ್ ಖರೀದಿ ಮಾಡುವುದಿಲ್ಲ. ಯಾಕೆಂದರೆ ವರ್ಷಪೂರ್ತಿ ಅಧಿವೇಶನ ನಡೆಯುವುದಿಲ್ಲ. ವಿಧಾನಸೌಧದಲ್ಲಿ ವರ್ಷಕ್ಕೆ ಕೇವಲ 30 ದಿನಗಳ ಕಲಾಪ ನಡೆಯುತ್ತವೆ. ಹೀಗಾಗಿ, ಖರೀದಿ ಮಾಡುವ ಬದಲು ರಿಕ್ಲೈನರ್ ಕುರ್ಚಿಗಳನ್ನು ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗುವುದು. ಸದನ ಮುಗಿದ ಬಳಿಕ ಅವುಗಳನ್ನು ಹಿಂತಿರುಗಿಸಲಾಗುವುದು. ಶಾಸಕರು ಸದನಕ್ಕೆ ಹಾಜರಾಗಲು ಈಗಾಗಲೇ ಹಲವು ಸುಧಾರಣೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂತೆಯೇ ಇದು ಸಹ ಒಂದಾಗಿದ್ದು, ಇದರಿಂದ ಸದನದಲ್ಲಿ ಶಾಸಕರು ಹಾಜರಾಗುವ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ" ಎಂದರು.

ಕಳೆದ ವರ್ಷ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಪ್ರಾಯೋಗಿಕವಾಗಿ ಒಂದು ರಿಕ್ಲೈನರ್ ಕುರ್ಚಿಯನ್ನು ಮೊಗಸಾಲೆಯಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ:'ತಮಗಿಷ್ಟ ಬಂದಂತೆ ಲೋಕಾಯುಕ್ತ ವರದಿ ಬರೆಸಿಕೊಂಡಿದ್ದಾರೆ, ಅವರನ್ನು ದೇವರೇ ಕಾಪಾಡಬೇಕು'

ABOUT THE AUTHOR

...view details