ಕರ್ನಾಟಕ

karnataka

ETV Bharat / state

ಸಾಲ ತೀರಿಸಲು ತಂದೆಯ ಹೆಸರಲ್ಲಿ ಎರಡು ವಿಮೆ ಮಾಡಿಸಿ ಕೊಲ್ಲಿಸಿದ ಪುತ್ರ: ನಾಲ್ವರ ಬಂಧನ - MURDER FOR INSURANCE MONEY

ವಿಮೆ ಹಣಕ್ಕಾಗಿ ತಂದೆಯನ್ನೇ ಕೊಲ್ಲಿಸಿ ಅಪಘಾತದ ಸುಳ್ಳು ಕಥೆ ಕಟ್ಟಿದ್ದ ಮಗ ಸೇರಿ ನಾಲ್ವರನ್ನು ಕಲಬುರಗಿಯ ಮಾಡಬೂಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು (ETV Bharat)

By ETV Bharat Karnataka Team

Published : Jan 8, 2025, 7:33 AM IST

ಕಲಬುರಗಿ:ವಿಮೆ ಹಣಕ್ಕಾಗಿ ಸ್ವಂತ ತಂದೆಯನ್ನೇ ಕೊಲೆ ಮಾಡಿಸಿದ ಮಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಮಾಡಬೂಳ ಪೊಲೀಸರು ಸೆರೆ ಹಿಡಿದಿದ್ದಾರೆ. ಕಾಳಿಂಗರಾಯ್ ಕೊಲೆಯಾದ ತಂದೆ. ಕಾಳಿಂಗರಾಯ್ ಅವರ ಪುತ್ರ ಸತೀಶ್ ಮತ್ತು ಇತರೆ ಆರೋಪಿಗಳಾದ ಅರುಣ್, ಯುವರಾಜ್ ಹಾಗೂ ರಾಕೇಶ್ ಬಂಧಿತರು.

ಪ್ರಕರಣದ ವಿವರ:ಪೊಲೀಸರು ಹೇಳಿರುವಂತೆ, ಕಾಳಿಂಗರಾಯ್​ ಅವರು ಕಲಬುರಗಿ ನಗರದ ಆದರ್ಶ್ ಕಾಲೊನಿಯ ತಮ್ಮ ನಿವಾಸದಲ್ಲಿ ವಾಸವಾಗಿದ್ದರು. ಇವರಿಗೆ ಮೂವರು ಮಕ್ಕಳು. ಈ ಪೈಕಿ ಸತೀಶ್ ಎಂಬಾತ ಅದೇ ಕಾಲೊನಿಯಲ್ಲಿ ಹೋಟೆಲ್‌ ನಡೆಸುತ್ತಿದ್ದ. ಮನೆ ಕಟ್ಟಲು, ಸಹೋದರಿಯರ ಮದುವೆಗಾಗಿ ಸತೀಶ್‌ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಪ್ರತಿದಿನ ಹೋಟೆಲ್‌ಗೆ ಬರುತ್ತಿದ್ದ ಅರುಣ್ ಎಂಬಾತನ ಜೊತೆಗೆ ಸತೀಶನಿಗೆ ಸ್ನೇಹ ಬೆಳೆದಿತ್ತು. ತನ್ನ ಸಾಲದ ವಿಚಾರವನ್ನು ಸತೀಶ್​, ಅರುಣ್ ಜೊತೆ ಹಂಚಿಕೊಂಡಿದ್ದ. ಆಗ ಅರುಣ್, ನಿಮ್ಮ ತಂದೆಯ ಹೆಸರಿನ ಮೇಲೆ ಎರಡು ಇನ್ಶೂರೆನ್ಸ್ ಮಾಡಿಸು ಅಂತಾ ಸಲಹೆ ಕೊಟ್ಟಿದ್ದಾನೆ. ಅದರಂತೆ ಸತೀಶ್ ತನ್ನ ತಂದೆಯ ಹೆಸರಿನ ಮೇಲೆ 22 ಲಕ್ಷ ಮತ್ತು 5 ಲಕ್ಷದ ಎರಡು ಇನ್ಶೂರೆನ್ಸ್ ಮಾಡಿಸಿದ್ದಾನೆ. ಬಳಿಕ ಅರುಣ್, ನಿಮ್ಮ ತಂದೆ ಇದ್ರೂ ಏನೂ ಪ್ರಯೋಜನವಿಲ್ಲ.‌ ಹಾಗಾಗಿ ತಂದೆಯನ್ನು ಅಪಘಾತದ ರೂಪದಲ್ಲಿ ಕೊಲೆ ಮಾಡೋಣ. ನನಗೆ ಮೂರು ಲಕ್ಷ ರೂಪಾಯಿ ಕೊಡು ಎಂದು ಡೀಲ್ ಮಾಡಿಕೊಳ್ತಾನೆ.

ಎಸ್​ಪಿ ಅಡ್ಡೂರು ಶ್ರೀನಿವಾಸುಲು ಮಾಹಿತಿ (ETV Bharat)

ಈ ಡೀಲ್‌ಗೆ ಒಪ್ಪಿದ ಸತೀಶ್, ಕಳೆದ ವರ್ಷ ಜುಲೈ 8ರಂದು ತಂದೆ ಕಾಳಿಂಗರಾಯರನ್ನು ಬೈಕ್‌ನಲ್ಲಿ ಕೂರಿಸಿ ಆದರ್ಶ್ ನಗರದಿಂದ ಬೆಣ್ಣೂರು ಗ್ರಾಮಕ್ಕೆ, ಸಾಲ ತರೋದಿದೆ ಬಾ ಎಂದು ಕರೆದುಕೊಂಡು ಹೋಗ್ತಾನೆ. ಬೆಣ್ಣೂರು ಕ್ರಾಸ್ ಬಳಿ ಮೂತ್ರವಿಸರ್ಜನೆ ಎಂದು ನಾಟಕವಾಡಿ ಬೈಕ್ ನಿಲ್ಲಿಸಿ ಹೋಗ್ತಾನೆ. ಬಳಿಕ ಬೈಕ್ ಬಳಿ ನಿಂತಿದ್ದ ತಂದೆ ಕಾಳಿಂಗರಾಯ್​ ಮೇಲೆ ಟ್ರ್ಯಾಕ್ಟರ್ ಹಾಯಿಸುತ್ತಾರೆ. ಇದರಿಂದ ಕಾಳಿಂಗರಾಯ್​ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.

ನಂತರ ತಂದೆಯ ಬಳಿಗೆ ಬಂದ ಸತೀಶ್,​ ಅರುಣ್​ ಕೈಯಿಂದ ಕಲ್ಲಿನಲ್ಲಿ ತಲೆಗೆ ಹೊಡೆಸಿಕೊಂಡು ಗಂಭೀರ ಗಾಯ ಮಾಡಿಕೊಂಡಿದ್ದ. ಬಳಿಕ ನೇರವಾಗಿ ಮಾಡಬೂಳ ಠಾಣೆಗೆ ಹೋಗಿದ್ದ ಸತೀಶ್,​ "ನಾವು ಬೈಕ್‌ನಲ್ಲಿ ಹೋಗ್ತಿರುವಾಗ ಯಾರೋ ಒಬ್ಬ ಟ್ರ್ಯಾಕ್ಟರ್‌ನಿಂದ ಗುದ್ದಿದ್ದು, ನಮ್ಮ ತಂದೆ ಕಾಳಿಂಗರಾಯ್​ ಮೃತಪಟ್ಟರು ಎಂದು ಸುಳ್ಳು ಕಥೆ ಹೇಳಿದ್ದಾನೆ.

ಸತೀಶನ ಮಾತು ನಂಬಿದ ಮಾಡಬೂಳ ಪೊಲೀಸರು ತನಿಖೆಗೆ ಇಳಿಯುತ್ತಾರೆ. ಕೊಲೆಗೆ ಯೋಜನೆ ರೂಪಿಸಿದ್ದ ಅರುಣ್​ಗೆ ಸತೀಶ್, ಒಂದು ಇನ್ಶೂರೆನ್ಸ್​ ಕ್ಲೈಮ್​ನಿಂದ ಬಂದಿದ್ದ 5 ಲಕ್ಷ ರೂ ಹಣದಲ್ಲಿ​ ತನ್ನ ತಾಯಿಯ ಫೋನ್​ ಪೇ ಮೂಲಕ 3 ಲಕ್ಷ ರೂಪಾಯಿ ಹಾಕಿದ್ದ. ಆದರೆ ಪೊಲೀಸರು ವಿಚಾರಣೆ ನಡೆಸಿದಾಗ ಸತೀಶ್​ ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ. ಇತ್ತ ಅರುಣ್​ ಅಕೌಂಟ್​ಗೆ 3 ಲಕ್ಷ ಹಣ ಹಾಕಿದ್ದರ ಬಗ್ಗೆ ಪೊಲೀಸರಿಗೆ ತಿಳಿದು ನಂತರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಂದಿದೆ. ಪೊಲೀಸರ ಮುಂದೆ ಸತೀಶ್​ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, "ಕಾಳಿಂಗರಾಯ್ ಮೇಲೆ ಟ್ರ್ಯಾಕ್ಟರ್​ ಹರಿಸಿದ ಯುವರಾಜ್ ಹಾಗೂ ರಾಕೇಶ್ ಅವರನ್ನು ಬಂಧಿಸಿದ್ದೇವೆ. ಕಾಳಿಂಗರಾಯ್ ಹೆಸರಿನಲ್ಲಿ ಪುತ್ರ ಸತೀಶ್ ಶ್ರೀರಾಮ್​ ಫೈನಾನ್ಸ್​ನಲ್ಲಿ ವಿಮೆ ಮಾಡಿಸಿರುತ್ತಾರೆ. ಇದರಿಂದ ಅವರಿಗೆ 5 ಲಕ್ಷ ಹಣ ಬಂದಿರುತ್ತದೆ. ಅದರಲ್ಲಿ 3 ಲಕ್ಷ ಹಣವನ್ನು ಅರುಣ್​ಗೆ ಕೊಟ್ಟು, 2 ಲಕ್ಷ ಬಳಸಿಕೊಂಡಿರುತ್ತಾರೆ. ಇನ್ನು ಸತೀಶ್, ಅರುಣ್​ಗೆ ಇನ್ನೂ 2 ಲಕ್ಷ ಕೊಡಬೇಕಾಗಿರುತ್ತದೆ. ಆ ಪೈಕಿ 50 ಸಾವಿರ ಕೊಟ್ಟಿದ್ದರು, ಒಟ್ಟು ಮೂರುವರೆ ಲಕ್ಷ ಹಣ ನೀಡಿದ್ದರು. ಕಾಳಿಂಗರಾಯ್ ಹೆಸರಿನಲ್ಲಿ ಇನ್ನೊಂದು ಹೆಲ್ತ್​ ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಚಾರ್ಜ್​ಶೀಟ್ ಆಗಿ ತನಿಖಾ ವರಿದಿ ಸಲ್ಲಿಕೆಯಾದ ಮೇಲೆ ವಿಮೆ ಹಣ ಕೊಡುವುದಾಗಿ ​ಇನ್ಶೂರೆನ್ಸ್ ಕಂಪನಿ ಹೇಳಿತ್ತು. ನಾಲ್ವರನ್ನು ಬಂಧಿಸಿ, 27 ಸಾವಿರ ನಗದು ಮತ್ತು ಟ್ರ್ಯಾಕ್ಟರ್​ ಅನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದರು.

"ಕಾಳಿಂಗರಾಯ್ ಕಷ್ಟಪಟ್ಟು ದುಡಿದು ತನ್ನ ಮಕ್ಕಳ ಬದುಕು ರೂಪಿಸಿದ್ದರು. ಆದರ್ಶ ನಗರದಲ್ಲಿ ಹೋಟೆಲ್ ನಡೆಸಿಕೊಂಡಿದ್ದ ಸತೀಶ್ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೇ ಮನೆಯನ್ನೂ ಮಾರಾಟ ಮಾಡಿದ್ದ" ಎಂದು ಕೊಲೆಯಾದ ಕಾಳಿಂಗರಾಯ್ ಸಹೋದರ ದತ್ತು ಹೇಳಿದ್ದಾರೆ.

ಪ್ರಕರಣ ಬೇಧಿಸಿದ ಶಹಬಾದ್ ಡಿವೈಎಸ್​ಪಿ ಶಂಕರಗೌಡ, ಮಾಡಬೂಳ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಗೆ ಎಸ್​ಪಿ ಅಡ್ಡೂರು ಶ್ರೀನಿವಾಸುಲು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ಇದನ್ನೂ ಓದಿ:ಬಳ್ಳಾರಿಯಲ್ಲಿ ಕಳ್ಳತನವಾಗಿದ್ದ ಎರಡೂವರೆ ಕೆಜಿ ಚಿನ್ನಾಭರಣ ಜಪ್ತಿ; ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

ಇದನ್ನೂ ಓದಿ:ಜಮೀನು ವ್ಯಾಜ್ಯ; ಪೆಟ್ರೋಲ್ ಬಾಂಬ್ ಎಸೆದು ಸಾಮೂಹಿಕ ಹತ್ಯೆಗೆ ಯತ್ನ- ಪೊಲೀಸರು ಹೇಳಿದ್ದೇನು? - MASS DEATH OF ENTIRE FAMILY

ABOUT THE AUTHOR

...view details