ಬೆಂಗಳೂರು:ಸಚಿವರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಆಗುತ್ತೆ. ನನ್ನ ಇಲಾಖೆಯಲ್ಲೂ ಕೆಲವು ವ್ಯತ್ಯಾಸಗಳಾಗಿತ್ತು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿರುವ ವಿಚಾರವಾಗಿ ಇಂದು ಪ್ರತಿಕ್ರಿಯಿಸಿದ ಅವರು, ಪ್ರಕರಣದಲ್ಲಿ ನನ್ನ ಯಾವುದೇ ಕೈವಾಡವಿಲ್ಲ ಎಂದರು. ಮುಂದುವರೆದು ಮಾತನಾಡಿ, ಹಲವು ಸಲ ಹಣ ವರ್ಗಾವಣೆ ಆಗುತ್ತದೆ. ನನ್ನ ಇಲಾಖೆಯಲ್ಲೂ ಕೆಲವು ವ್ಯತ್ಯಾಸವಾಗಿದೆ. ಇದನ್ನು ನೋಡಿ ನನಗೂ ಅಚ್ಚರಿಯಾಗಿತ್ತು. ಕೆಲವರನ್ನು ಸಸ್ಪೆಂಡ್ ಮಾಡಿದ್ದೇನೆ. ಹಣ ಬೇರೆ ರಾಜ್ಯಕ್ಕೆ ವರ್ಗಾವಣೆ ಆಗಿರುವ ವಿಚಾರವಾಗಿ ಸಿಎಂ ತನಿಖೆಗೆ ಆದೇಶ ಮಾಡ್ತಾರೆ. ಯಾವ ರೀತಿ ತನಿಖೆ ಎಂಬುದನ್ನು ಅವರು ನಿರ್ಧರಿಸುತ್ತಾರೆ ಎಂದರು.
ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಹಿರಿಯರನ್ನು ಕಡೆಗಣಿಸಿದ್ದಾರೆಂಬ ಆರೋಪಕ್ಕೆ, ಎಲ್ಲವೂ 4 ಗೋಡೆಗಳ ಮಧ್ಯೆ ಚರ್ಚೆಯಾಗುತ್ತದೆ. ಈ ಹಿಂದೆ ನಾಲ್ವರ ಕಮಿಟಿ ಇತ್ತು. ಸಮ್ಮಿಶ್ರ ಸರ್ಕಾರದಲ್ಲೂ ಕಮಿಟಿ ಇತ್ತು. ಇದರ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇವೆ ಎಂದು ತಿಳಿಸಿದರು.
ನಾನು ಲಾಬಿ ಮಾಡಿಲ್ಲ:ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ, ನಾನೇನು ಲಾಬಿ ಮಾಡಿಲ್ಲ. ಲಾಬಿ ಮಾಡುವ ಸಂದರ್ಭವೂ ಇಲ್ಲ. ಲೋಕಸಭೆ ಚುನಾವಣೆಯ ನಂತರ ಈ ವಿಚಾರ ಚರ್ಚೆಗೆ ಬರಲಿದೆ. ಪಕ್ಷದಲ್ಲಿ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಬಯಸಿದರೆ ಎಲ್ಲವೂ ಆಗುತ್ತದೆ. ಸಂಪುಟ ಪುನಾರಚನೆಯೂ ಆಗುತ್ತದೆ. ಇನ್ನು ಸಿಎಂ ಬದಲಾವಣೆ ವಿಚಾರ ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಅಧಿಕಾರಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆ, ಸಚಿವ ನಾಗೇಂದ್ರ ರಾಜೀನಾಮೆಗೆ ವಿಜಯೇಂದ್ರ ಆಗ್ರಹ - B Y VIJAYENDRA