ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ಹೆಚ್ಚಿದ ಒಲವು (ETV Bharat) ಬೆಂಗಳೂರು: ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ರಾಜ್ಯದ ರೈತರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕೆಆರ್‌ಇಡಿಎಲ್) ನಿಯಮಿತ ಅನುಷ್ಠಾನ ಮಾಡುತ್ತಿದ್ದು, ಈ ಯೋಜನೆಯ ಪ್ರಯೋಜನ ಹೆಚ್ಚು ರೈತರು ಪಡೆದುಕೊಳ್ಳಲೆಂದು ರಾಜ್ಯ ಸರ್ಕಾರ ತನ್ನ ಪಾಲಿನ ಸಹಾಯಧನವನ್ನು ಶೇ.30 ರಿಂದ ಶೇ.50 ಕ್ಕೆ ಏರಿಕೆ ಮಾಡಿದೆ.
ವಿದ್ಯುತ್ ಜಾಲದಿಂದ 500 ಮೀಟರ್ ಆಚೆಯಿರುವ ರೈತ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಿದೆ.
ಕುಸುಮ್ ಬಿ ಯೋಜನೆಯಡಿ ಸೌರ ಪಂಪ್‌ಸೆಟ್ ಬಳಕೆಗೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಮಾರ್ಚ್ನಲ್ಲಿ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ 'ರೈತ ಸೌರಶಕ್ತಿ ಮೇಳ' ಆಯೋಜಿಸಿತ್ತು.
ಕುಸುಮ್ ಬಿ ಯೋಜನೆ ಅಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೌರ ಪಂಪ್‌ಸೆಟ್ ಅಳವಡಿಕೆಯನ್ನು ರೈತರ ಸಮೂಹಗಳಲ್ಲಿ ಉತ್ತೇಜಿಸಲು ರಾಜ್ಯ ಸರ್ಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ.30 ರಷ್ಟು ಸಹಾಯಧನವನ್ನು ಶೇ.50ಕ್ಕೆ ಹೆಚ್ಚಿಸಿದೆ. ಇನ್ನು ಕೇಂದ್ರ ಸರ್ಕಾರ ಶೇ.30 ರಷ್ಟು ಹಣ ನೀಡುತ್ತದೆ. ಒಟ್ಟಾರೆ ಮೊತ್ತದಲ್ಲಿ ಶೇ.20 ರಷ್ಟನ್ನು ಮಾತ್ರ ರೈತರು ಭರಿಸಬೇಕಾಗಿರುತ್ತದೆ. ಇದಲ್ಲದೇ, ಯೋಜನೆಯಡಿ ರೈತರಿಗೆ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸಲಿದೆ.
ಸೌರಮಿತ್ರ ಪೋರ್ಟಲ್: ಕರ್ನಾಟಕದಲ್ಲಿ ಈವರೆಗೆ ಸುಮಾರು 7 ಸಾವಿರ ಸೌರ ಪಂಪ್ ಸೆಟ್‌ಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಜಾಲಮುಕ್ತ ಸ್ವತಂತ್ರ ಸೌರ ನೀರಾವರಿ ಪಂಪ್‌ಸೆಟ್ ಅಳವಡಿಸುವ ಯೋಜನೆಗೆ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 'ಸೌರಮಿತ್ರ' ಪೋರ್ಟಲ್‌ನಲ್ಲಿ ಎರಡು ತಿಂಗಳಲ್ಲೇ ಸುಮಾರು 16,300 ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಅನಧಿಕೃತ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಯೋಜನೆಯಡಿ 10 ಸಾವಿರ ರೂ. ಅಥವಾ 50 ರೂ.ಗಿಂತ ಹೆಚ್ಚಿನ ಮೊತ್ತವನ್ನು ರೈತರು ಪಾವತಿಸಿ, ಅರ್ಜಿ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲು ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿದವರಿಗೆ ಮೊದಲ ಸೋಲಾರ್ ಪಂಪ್‌ಸೆಟ್ ಅಳವಡಿಸಲಾಗುತ್ತದೆ ಎಂದು ಕೆಆರ್ಇಡಿಎಲ್ನ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ವಲಯದಲ್ಲಿ 'ಹಸಿರು ಇಂಧನ'ದ ಟ್ರೆಂಡ್ ಸೃಷ್ಟಿಸುವಲ್ಲಿ ನಿರೀಕ್ಷಿತ ಯಶಸ್ಸು ಸಂಪಾದಿಸಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆ ಉತ್ತೇಜಿಸಲು ಉದ್ದೇಶಿತ 'ಪ್ರಧಾನಮಂತ್ರಿ ಕುಸುಮ್ ಯೋಜನೆಯು ಕೇಂದ್ರ - ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಾಗಿದೆ. ಪಿಎಂ ಕುಸುಮ್-ಎ, ಬಿ ಮತ್ತು ಸಿ ವಿಭಾಗಗಳನ್ನು ಹೊಂದಿದೆ. ಈ ಪೈಕಿ ಪಿಎಂ ಕುಸುಮ್-ಬಿಯಡಿ ಜಾಲಮುಕ್ತ ಸೌರ ಕೃಷಿ ಪಂಪ್‌ಸೆಟ್‌ಗಳ ಅಳವಡಿಕೆ ಸೇರಿಸಲಾಗಿದೆ.
ತಪಾಸಣೆ:ಹೆಸರು ನೋಂದಣಿ ಮಾಡಿಕೊಂಡ ರೈತರ ಪೈಕಿ ಅರ್ಹ ರೈತರನ್ನು ಗುರುತಿಸಿಲು ಒಂದೆರಡು ವಾರದಲ್ಲಿ ರೈತ, ಎಸ್ಕಾಂ ಶಾಖಾಧಿಕಾರಿ, ಮಾರಾಟಗಾರರ ಪ್ರತಿನಿಧಿ ಒಳಗೊಂಡ ಜಂಟಿ ತಂಡವು ಸ್ಥಳ ತಪಾಸಣೆ ಮಾಡಲಿದೆ. ಯೋಜನೆಯಡಿ ಮೂರು ಅಶ್ವಶಕ್ತಿ ಭೂಮೇಲ್ಮೈ, ಐದರಿಂದ 7.50 ಅಶ್ವಶಕ್ತಿ ಸಬ್‌ಮರ್ಸಿಬಲ್ ಸೌರ ಪಂಪ್‌ಗಳ ಒಟ್ಟು ವೆಚ್ಚದಲ್ಲಿ ಕೇಂದ್ರ ಸರ್ಕಾರ ಸಹಾಯಧನ ನೀಡುತ್ತದೆ. ಇದರಡಿ 10 ಅಶ್ವಶಕ್ತಿ ಸಬ್‌ಮರ್ಸಿಬಲ್ ಸೌರ ಪಂಪ್‌ಸೆಟ್‌ಗಳನ್ನು ರಾಜ್ಯ ಸರ್ಕಾರ ಸೇರಿಸಿದೆ. ಸೋಲಾರ್ ಐಪಿ ಸೆಟ್‌ಗಳ ಒಟ್ಟು ದರದಲ್ಲಿ ಕೇಂದ್ರ ಸರ್ಕಾರ ಶೇ.30, ರಾಜ್ಯ ಸರ್ಕಾರ ಶೇ.50 ಉಳಿದ ಶೇ.20 ಅನ್ನು ಲಾನುಭವಿ ರೈತರು ವಂತಿಗೆ ರೂಪದಲ್ಲಿ ನೀಡಬೇಕಾಗುತ್ತದೆ.
ಜಾಲಮುಕ್ತ 40 ಸಾವಿರ ಸೋಲಾರ್ ಪಂಪ್ ಮಾರಾಟಗಾರರನ್ನು ಎಂಪನೆಲ್‌ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿ, ಗುರಿ ನಿಗದಿಪಡಿಸಿದೆ. ಈ ನಿಟ್ಟಿನಲ್ಲಿ ನಿಗಮ ಮತ್ತೊಂದು ಹೆಜ್ಜೆಯಿಟ್ಟು 13 ಮಾರಾಟಗಾರರಿಗೆ ಕಾರ್ಯಾದೇಶ ನೀಡಿದೆ. ಮೊದಲ ಹಂತದಲ್ಲಿ 1,200 ಸೋಲಾರ್ ಕೃಷಿ ಪಂಪ್‌ಸೆಟ್ ಅಳವಡಿಕೆಯನ್ನು ತಲಾ 100ರಂತೆ 12 ಮಾರಾಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಸೋಲಾರ್ ಐಪಿ ಸೆಟ್ ಅಳವಡಿಸಿ ಚಾಲನೆ ನೀಡುವ ಕಾರ್ಯ ಪೂರ್ಣಗೊಳಿಸುವುದಕ್ಕೆ 24 ತಿಂಗಳ ಕಾಲಮಿತಿಯಿದೆ. ಅದಕ್ಕಿಂತ ಮುಂಚೆ, ಉತ್ತಮ ಗುಣಮಟ್ಟದ ಕೆಲಸ ಮುಗಿಸಿದವರಿಗೆ ಮತ್ತಷ್ಟು ಸೌರ ಪಂಪ್‌ಗಳ ಅಳವಡಿಕೆಗೆ ಕಾರ್ಯಾದೇಶ ನೀಡಲಾಗುತ್ತದೆ ಎಂದು ನಿಗಮ ತಿಳಿಸಿದೆ.
ರಾಜ್ಯ ಸರ್ಕಾರ ಒಟ್ಟು 40 ಸಾವಿರ ಸೌರ ಕೃಷಿ ಪಂಪ್‌ಸೆಟ್‌ಗಳಿಗೆ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರೆ, ಕೇಂದ್ರ ಸರ್ಕಾರ 25 ಸಾವಿರ ಸೌರ ಪಂಪ್‌ಸೆಟ್‌ಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಮಂಜೂರಾದ ಐಪಿ ಸೆಟ್‌ಗಳನ್ನು 24 ತಿಂಗಳೊಳಗೆ ಅಳವಡಿಸುವ ಕಾಲಮಿತಿ ವಿಧಿಸಿದೆ. ನಿಗದಿತ ಗುರಿ ಸಾಧಿಸಿದರೆ ಇನ್ನಷ್ಟು ಸೌರ ಕೃಷಿ ಪಂಪ್‌ಸೆಟ್‌ಗಳನ್ನು ಮಂಜೂರು ಮಾಡಲಿದೆ.
ಹೆಸರು ನೋಂದಣಿ, ಜಂಟಿ ತಪಾಸಣೆ, ಅರ್ಹ ರೈತರು ಮತ್ತು ಮಾರಾಟಗಾರರ ನಡುವೆ ಒಪ್ಪಂದ, ರೈತರು ತಮ್ಮ ಪಾಲಿನ ವಂತಿಗೆ ಪಾವತಿ, ಸಬ್ಸಿಡಿ ಭರ್ತಿ ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯಲಿದೆ. ಜಂಟಿ ಸ್ಥಳ ತಪಾಸಣೆಯಲ್ಲಿ ಅರ್ಹತೆ ಪಡೆದ ರೈತರು ತಮ್ಮ ಪಾಲಿನ ವಂತಿಗೆ ಪಾವತಿಸಿದ ಕೂಡಲೇ ಸೌರ ಪಂಪ್ ಅಳವಡಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಒಟ್ಟು ವೆಚ್ಚದಲ್ಲಿ ಕೇಂದ್ರ ಸಬ್ಸಿಡಿಯನ್ನು ರಾಜ್ಯವೇ ಭರಿಸಲಿದ್ದು, ನಂತರ ಕೇಂದ್ರದ ಪಾಲು ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ನೋಂದಣಿ ಮಾಡುವುದು ಹೇಗೆ?:ಆಸಕ್ತ ರೈತರು ತಮ್ಮ ಆಧಾರ್ ಸಂಖ್ಯೆ, ಆರ್‌ಟಿಸಿ (ಪಹಣಿ ಪ್ರತಿ) ಮತ್ತು ಬ್ಯಾಂಕ್ ವಿವರಗಳೊಂದಿಗೆ ಪೋರ್ಟಲ್ (https://souramitra.com) ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಸಮಸ್ಯೆ ಅಥವಾ ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ (ಸಂಖ್ಯೆ 080-22202100)ಗೆ ಕರೆ ಮಾಡಬಹುದು.
ವೆಚ್ಚ, ವಂತಿಗೆ ಬಗ್ಗೆ ಮಾಹಿತಿ
- ಸೌರ ಪಂಪ್ ಸಾಮರ್ಥ್ಯ 3 ಎಚ್ ಪಿ ಸರ್ಫೇಸ್ಗೆ ಸೌರ ಪಂಪ್ ಸೆಟ್ ದರ 2,04,760, ರೂ., ರಾಜ್ಯದ ಸಬ್ಸಿಡಿ 1,02,380 ರೂ., ಕೇಂದ್ರದ ಸಬ್ಸಿಡಿ 57,157 ರೂ. ಹಾಗೂ ರೈತರ ವಂತಿಗೆ 45,223.
- 5 ಎಚ್‌ಪಿ ಸಬ್ ಮರ್ಸಿಬಲ್ಗೆ ಸೌರಪಂಪ್ ಸೆಟ್ ದರ 2,98,384 ರೂ., ರಾಜ್ಯದ ಸಬ್ಸಿಡಿ 1,49,192 ರೂ., ಕೇಂದ್ರದ ಸಬ್ಸಿಡಿ 88,050 ರೂ. ಹಾಗೂ ರೈತರ ವಂತಿಕೆ 61,142.
- 7.5 ಎಚ್ ಪಿ ಸಬ್ ಮರ್ಸಿಬಲ್ ಸೌರ ಪಂಪ್ ಸೆಟ್ ದರ 4,09,680 ರೂ., ರಾಜ್ಯದ ಸಬ್ಸಿಡಿ 2,04,840 ರೂ.,ಕೇಂದ್ರದ ಸಬ್ಸಿಡಿ 1,19,342 ಹಾಗೂ ರೈತರ ವಂತಿಕೆ 85,498 ರೂ.
- 10 ಎಚ್ ಪಿ ಸಬ್ ಮರ್ಸಿಬಲ್ ಸೌರ ಪಂಪ್ ಸೆಟ್ ದರ 5,14,279 ರಾಜ್ಯದ ಸಬ್ಸಿಡಿ 2,04,840 ರೂ., ಕೇಂದ್ರದ ಸಬ್ಸಿಡಿ 1,19,342 ಹಾಗೂ ರೈತರ ವಂತಿಕೆ 1,90,097 ರೂ.
"ಸೋಲಾರ್ ಪಂಪ್ಗೆ ಸುಮಾರು 4.10 ಲಕ್ಷ ರೂ.ವರೆಗೆ ವೆಚ್ಚವನ್ನು ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ಶೇ.30, ರಾಜ್ಯ ಸರ್ಕಾರದಿಂದ ಶೇ.50 ರಷ್ಟು ಸಹಾಯಧನ ಸಿಗುತ್ತದೆ. ರೈತರು ಶೇ. 20ರಷ್ಟು ಭರಿಸಿದರೆ, ಐದು ವರ್ಷ ಗ್ಯಾರಂಟಿ ಇರುತ್ತದೆ. ಸೋಲಾರ್ ಪಂಪ್ಗೆ ಆನ್ಲೈನ್ ಮೂಲಕ ಸಲ್ಲಿಸಿ ಅನುಮತಿ ಪಡೆದರೆ ಐದು ವರ್ಷ ಅದನ್ನು ನಿರ್ವಹಿಸುವ ಜವಾಬ್ದಾರಿ ನಮ್ಮದು. 3 ಹೆಚ್ಪಿ, 5 ಹೆಚ್ಪಿ, 7.5 ಹೆಚ್ಪಿ ಮತ್ತು 10 ಹೆಚ್ಪಿವರೆಗೂ ಇದೆ. ಹತ್ತು ಹೆಚ್ಪಿ ಆಳವಡಿಸಿಕೊಂಡರೆ ಸುಮಾರು 10 ಎಕರೆವರೆಗೂ ನೀರು ಹರಿಸಬಹುದು" ಎನ್ನುತ್ತಾರೆ ಹೈದರಾಬಾದ್ ಮೂಲದ ಸನ್ ಗ್ರೇಸ್ ಎನರ್ಜಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಪವನ್ ಕುಮಾರ್ ಸಿದ್ದಿ ತಿಳಿಸಿದ್ದಾರೆ.
ಇದನ್ನೂ ಓದಿ:2032ರ ಹೊತ್ತಿಗೆ 1 ಟ್ರಿಲಿಯನ್ ಡಾಲರ್ ಜಿಡಿಪಿ ಗುರಿ: ಸಿದ್ದರಾಮಯ್ಯ ಆಶಯ - GDP of 1 trillion dollars by 2032