ಬೆಂಗಳೂರು: ಹಿಂದುಳಿದ ವರ್ಗಗಳ ಇಲಾಖೆಯಡಿ ಭಕ್ತವತ್ಸಲ ಆಯೋಗದ ವರದಿಯನ್ನು ಕೈಬಿಡಲು ನಿರ್ಧರಿಸಿರುವ ಸಚಿವ ಸಂಪುಟ ಸಭೆ, ಕೌನ್ಸಿಲಿಂಗ್ ಮೂಲಕ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಡಿದೆ.
ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಇದುವರೆಗೂ ನೇರವಾಗಿ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಮಾಡಲಾಗುತ್ತಿತ್ತು. ಇದನ್ನು ಬದಲಿಸಲಾಗಿದ್ದು, ಈಗಿನಿಂದಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ಸರ್ಕಾರ ನಿರ್ಧರಿಸಿದೆ. ಅಕ್ರಮ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವರ್ಗಾವಣೆಗೆ ಹೊಸ ನೀತಿ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಸಬ್ ರಿಜಿಸ್ಟ್ರಾರ್ ಹಂತಕ್ಕಿಂತ ಕೆಳ ಅಧಿಕಾರಿಗಳ ವರ್ಗಾವಣೆಗೂ ಕೌನ್ಸಿಲಿಂಗ್ ಮಾಡಲಾಗುವುದು. ಬೆಂಗಳೂರಿನಲ್ಲಿ 5 ವರ್ಷಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡಿದರೆ ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನೋಂದಣಿ ಇಲಾಖೆಯಲ್ಲಿ ವರ್ಗಾವಣೆ ಪಾರದರ್ಶಕ ಮಾಡಲು ಕೌನ್ಸಿಲಿಂಗ್ ಪದ್ದತಿ ಜಾರಿಗೆ ತರುತ್ತಿದ್ದೇವೆ. ಎಫ್.ಡಿ.ಎ ಹೊರತುಪಡಿಸಿ ಸಬ್ ರಿಜಿಸ್ಟ್ರಾರ್ಗಳಿಗೆ ವರ್ಗಾವಣೆ ಆಗಲಿದೆ. ಕಾರ್ಪೋರೇಷನ್ ಪ್ರದೇಶದ ವ್ಯಾಪ್ತಿಗೆ ಬರುವ ಸಬ್ ರಿಜಿಸ್ಟ್ರಾರ್ಗಳಿಗೆ ವರ್ಗಾವಣೆ ಕೌನ್ಸಿಲಿಂಗ್ ಅನ್ನು ಇಲಾಖೆಯೇ ನೋಡಿಕೊಳ್ಳಲಿದೆ. ಆ ಮೂಲಕ ಪಾರದರ್ಶಕತೆ ತರಲು ಇದರಿಂದ ಸಾಧ್ಯವಾಗುತ್ತದೆ. ಶೋಷಣೆ ಮುಕ್ತ ವ್ಯವಸ್ಥೆ ರೂಪುಗೊಳ್ಳಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಪಂಚಾಯತ್ ರಾಜ್ ಸಂಸ್ಥೆಗಳು/ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸಲು ಡಾ.ಜಸ್ಟೀಸ್ ಕೆ.ಭಕ್ತವತ್ಸಲ ಆಯೋಗ ಮಾಡಿರುವ ಶಿಫಾರಸು ಕೈಬಿಡುವ ಹಾಗೂ ಹಾಲಿ ವ್ಯವಸ್ಥೆಯನ್ನು ಮುಂದುವರೆಸಲು ಒಪ್ಪಿಗೆ ನೀಡಲಾಗಿದೆ.
ಬಾಗಲಕೋಟೆಯ ರನ್ನ ಸಕ್ಕರೆ ಕಾರ್ಖಾನೆ ಖಾಸಗಿ ಗುತ್ತಿಗೆಗೆ ಒಪ್ಪಿಗೆ, ಇಂದಿರಾ ಕ್ಯಾಂಟೀನ್ ಕಿಚನ್ಗಳಿಗೆ ಅಡುಗೆ ಉಪಕರಣ ಖರೀದಿಗೆ 84.58 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಪಂಚಾಯತ್ರಾಜ್ ಇಲಾಖೆ ಅಡಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಅನುಮೋದನೆ ನೀಡಿದ್ದೇವೆ.
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯ ವಿಮಾದಾರರಿಗೆ 2018-20ರ ದೈವಾರ್ಷಿಕ ಅವಧಿಗೆ ಅಧಿಲಾಭಾಂಶ (Bonus)ವನ್ನು ಘೋ಼ಷಿಸುವುದು. 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ಫೆ. 28- 2025ರವರೆಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಹಂತ-2ನ್ನು ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮೊತ್ತ 2000 ಕೋಟಿ ರೂ.ಗಳ ಯೋಜನಾ ಅಂದಾಜಿನಲ್ಲಿ ರಾಜ್ಯ ಸರ್ಕಾರದ ಪಾಲಿನ ಶೇ.7.5ರಷ್ಟು ಮೊತ್ತ 150.00 ಕೋಟಿ ರೂ.ಗಳು, ಮಹಾನಗರ ಪಾಲಿಕೆಯ ಸ್ವಂತ ಸಂಪನ್ಮೂಲದಿಂದ ಶೇ.7.5ರಷ್ಟು ಮೊತ್ತ 150.00 ಕೋಟಿ ರೂ.ಗಳು ಹಾಗೂ ಯುಐಡಿಎಫ್ನಿಂದ ಸಾಲದ ರೂಪದಲ್ಲಿ ಶೇ.85 ರಷ್ಟು ಮೊತ್ತ 1700.00 ಕೋಟಿ ರೂ.ಗಳಲ್ಲಿ 2024-25ನೇ ಸಾಲಿನಿಂದ 2026-27ನೇ ಸಾಲಿನವರೆಗೆ ಮೂರು ವರ್ಷಗಳ ಅವಧಿಯಲ್ಲಿ ಪೌರಾಡಳಿತ ನಿರ್ದೇಶನಾಲಯದಿಂದ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಿಧನರಾದ ಸಿ.ಎಂ.ಶಿವಕುಮಾರ್, ಅಧೀಕ್ಷಕ ಅಭಿಯಂತರರು ಹಾಗೂ ಪ್ರಭಾರ ಮುಖ್ಯ ಅಭಿಯಂತರರು ಇವರಿಗೆ 50.00 ಲಕ್ಷ ರೂ.ಗಳ ಪರಿಹಾರ ಹಾಗೂ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಮತ್ತು ತೀವ್ರ ಗಾಯಗೊಂಡ ಉಳಿದವರಿಗೆ ಪರಿಹಾರಧನವನ್ನು ಇಲಾಖಾ ಸಚಿವರ ಅನುಮೋದನೆಯೊಂದಿಗೆ ನಿರ್ಧರಿಸಿ, ಸರ್ಕಾರಿ ಉದ್ಯೋಗವನ್ನು ನೀಡಲು ಸಂಪುಟ ಸಭೆ ಅನುಮೋದಿಸಿದೆ. ಪಶು ಸಂಗೋಪನೆ ಇಲಾಖೆ ವ್ಯಾಪ್ತಿಯ ಒಳನಾಡು ಕೆರೆ, ಜಲಾಶಯಗಳಲ್ಲಿ ಮೀನು ಸಾಕಣೆಗೆ ಟೆಂಡರ್ ಮುಂದುವರಿಕೆಗೆ ಡಿಸಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
ಜುಲೈ 8 ಮತ್ತು 9ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲು ಸಂಪುಟ ಒಪ್ಪಿಗೆ ಸೂಚಿಸಿದೆ. ಸುಮಾರು 26 ಇಲಾಖೆಗಳ ವಿಷಯಕ್ಕೆ ಸಂಬಂಧಪಟ್ಟಂತೆ ಸಭೆ ಸಿಎಂ ನಡೆಸಲಿದ್ದಾರೆ ಎಂದು ಹೇಳಿದರು.
ಮುಡಾ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ಈಗಾಗಲೇ ರದ್ದು ಮಾಡಿರುವ ವಿಷಯದಲ್ಲಿ ತಪ್ಪು ಮಾಹಿತಿ ಹರಡಲು ಯತ್ನಿಸುತ್ತಿದ್ದಾರೆ. ಅಕ್ಟೋಬರ್ನಲ್ಲಿಯೇ 50:50 ಅನುಪಾತ ರದ್ದು ಮಾಡಲಾಗಿದೆ. ಇದರ ಬಗ್ಗೆ ಚರ್ಚೆ ನಿಮಗೆ ಮಹತ್ವ ಎನಿಸಿರಬಹುದು. ಆದರೆ, ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದು ತಿಳಿಸಿದರು.