ಮೈಸೂರು:ಜಾರಿ ನಿರ್ದೇಶನಾಲಯವು ಮುಡಾದ 300 ಕೋಟಿ ಮೌಲ್ಯದ 142 ನಿವೇಶನಗಳನ್ನ ಮುಟ್ಟುಗೋಲು ಹಾಕಿಕೊಂಡಿದೆ. ಇದರಿಂದ ನನ್ನ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಂತಾಗಿದೆ. ನಾನು ಮಾಡಿದ ಆರೋಪ ಸಾಬೀತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನಿವೇಶನಗಳನ್ನ ವಶಪಡಿಸಿಕೊಳ್ಳಲಿದೆ. ನ್ಯಾಯ ಸಿಗುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, 142 ನಿವೇಶನಗಳು ಯಾರು ಯಾರಿಗೆ ಸೇರಿದ್ದು ಎಂಬ ಬಗ್ಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಮುಡಾದಲ್ಲಿ ನಡೆದಿರುವ ಎಲ್ಲಾ ಅಕ್ರಮ ನಿವೇಶನಗಳನ್ನ ಇಡಿ ವಶಕ್ಕೆ ಪಡೆಯುವವರೆಗೆ ನನ್ನ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ನಾನು ಇಡಿಗೆ ದೂರು ಸಲ್ಲಿಸಿದಾಗ ಇವೆಲ್ಲಾ ಸುಳ್ಳು ಆರೋಪ, ರಾಜಕೀಯ ಪ್ರೇರಿತ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರು. ಆದರೂ ಕಾನೂನು ಹೋರಾಟ ಮುಂದುವರೆಸಿದ್ದೇನೆ. ಎಲ್ಲಾ ಅಕ್ರಮ ನಿವೇಶನಗಳು ಮತ್ತೆ ಮುಡಾಗೆ ಬರುವವರೆಗೆ ನನ್ನ ಹೋರಾಟ ಮುಂದುವರೆಯಲಿದೆ ಎಂದರು.