ಮೈಸೂರು: "ಮಂಗಳೂರಿನಲ್ಲಿ ಇತ್ತೀಚಿಗೆ ಬಂಧನಕ್ಕೊಳಗಾದ ಪ್ರಸಾದ್ ಅತ್ತಾವರ ಎಂಬುವರ ಫೋನ್ ಪರಿಶೀಲಿಸಿದಾಗ ನನ್ನ ಮತ್ತು ಗಂಗರಾಜು ಅವರ ಫೋಟೋ ಇಟ್ಟು, ಪ್ರಾಣಿಗಳ ಬಲಿಕೊಟ್ಟು ವಾಮಾಚಾರ ಮಾಡಿರುವುದು ಕಂಡುಬಂದಿದೆ. ಇದರ ಜೊತೆ ನನ್ನನ್ನು ಭೇಟಿ ಮಾಡಿ ಆಮಿಷವೊಡ್ಡಿದ್ದ ಹರ್ಷ ಮತ್ತು ಶ್ರೀನಿಧಿ ಅವರ ಹೆಸರನ್ನು ಚೀಟಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೆಲ್ಲ ನೋಡಿದಾಗ ಏನೋ ದೊಡ್ಡ ಸಂಚು ರೂಪಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ" ಎಂದು ಮುಡಾ ಪ್ರಕರಣದ ದೂರುದಾರ ಮತ್ತು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
"ತಮ್ಮ ಹಾಗೂ ಗಂಗರಾಜು ಅವರ ಫೋಟೋ ಇಟ್ಟು ಪ್ರಾಣಿ ಬಲಿ ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ಡಿ.9ರಂದು ಆ ಪೂಜೆಗಳು ನಡೆದಿವೆ, ಡಿ.13ರಂದು ಹರ್ಷ ಮತ್ತು ಶ್ರೀನಿಧಿ ಅವರು ನನ್ನನ್ನು ಭೇಟಿ ಮಾಡಿದ್ದರು. ಮುಡಾ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ದಯವಿಟ್ಟು ವಾಪಸ್ ತೆಗೆದುಕೊಳ್ಳಿ. ನಿಮಗೆ ಎಷ್ಟು ದುಡ್ಡು ಬೇಕೋ ಅಷ್ಟು ಕೊಡುತ್ತೇವೆ ಎಂದು ಅವರು ಹೇಳಿದ್ದರು" ಎಂದರು.
ಸಾಕ್ಷಿಗಳನ್ನು ಪೊಲೀಸರಿಗೆ ನೀಡುತ್ತೇನೆ:"ಇದರ ಜೊತೆಗೆ ನನ್ನ ಮಗನ ಜೊತೆ ಮಾತನಾಡಿ, ನಮ್ಮ ಬಾಸ್ ಮಂಗಳೂರಿನಲ್ಲಿದ್ದಾರೆ ಎಂದು ಅತ್ತಾವರ ಅವರ ಫೋಟೋ ತೋರಿಸಿ, ಇರುವ ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ. ಅವರೇ ನೀವು ಹೋಗಿ ಕೆಲಸ ಆಗುತ್ತದೆ ಎಂದು ಹೇಳಿ ಕಳುಹಿಸಿದ್ದರು ಎಂದು ಹೇಳಿದ್ದರು. ಇದರಲ್ಲಿ ಸಾಕಷ್ಟು ಅನುಮಾನಾಸ್ಪದ ಸಂಗತಿಗಳು ಕಂಡು ಬಂದಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಇದರ ಹಿಂದೆ ಯಾರಿದ್ದಾರೆ, ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಘಟನೆ ಸಂಬಂಧ ಈಗಾಗಲೇ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ವಿಚಾರ ಸಂಬಂಧ ನನ್ನ ಬಳಿ ಇರುವ ಸಾಕ್ಷಿಗಳನ್ನು ಪೊಲೀಸರಿಗೆ ನೀಡುತ್ತೇನೆ" ಎಂದು ತಿಳಿಸಿದರು.