ಮೈಸೂರು:"ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ನಡಿದಿದೆ ಎಂದು ನಮಗೆ ಅನುಮಾನವಿದೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ(ಇ.ಡಿ) ತನಿಖೆ ನಡೆಸುವುದು ಸೂಕ್ತ ಎಂದು ಈಗಾಗಲೇ ಇ- ಮೇಲ್ ಮೂಲಕ ಮನವಿ ಪತ್ರ ಕಳುಹಿಸಿದ್ದೇನೆ. ನಾಳೆ(ಸೋಮವಾರ) ಅಧಿಕೃತವಾಗಿ ಇ.ಡಿ ಕಚೇರಿಗೆ ಒಂದು ಪ್ರತಿಯನ್ನು ಕೊಟ್ಟು, ಸ್ವೀಕೃತಿ ಪತ್ರ ಪಡೆಯುತ್ತೇನೆ" ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ತಿಳಿಸಿದರು.
"ಸಿದ್ದರಾಮಯ್ಯನವರ ಪ್ರಕರಣ ಉದಾಹರಣೆಗೆ ಇಟ್ಟುಕೊಂಡು ಮುಡಾದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬುದೇ ನನ್ನ ಉದ್ದೇಶ. 2015 ರಿಂದ ಇಲ್ಲಿಯವರೆಗೆ ಮುಡಾದಲ್ಲಿ 50-50 ಅನುಪಾತದಲ್ಲಿ ಸೈಟು ಹಂಚಿಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಅರ್ಹ ಫಲಾನುಭವಿಗಳಿಗೆ ನಿವೇಶನಗಳು ದೊರೆತಿಲ್ಲ. ಇದಕ್ಕಾಗಿ ನಾನು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದೇನೆ. ಈಗಾಗಲೇ ನಾವು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದೇವೆ ಮತ್ತು ಸಿಬಿಐ ತನಿಖೆ ನಡೆಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ. ಕೋರ್ಟ್ ವಿಚಾರಣೆ ನಡೆಸಿ ಸಿಬಿಐ ತನಿಖೆಗೆ ವಹಿಸಿದರೆ ಸಿಬಿಐ ತನಿಖೆ ಮಾಡಲಿದೆ" ಎಂದರು.