ಮೈಸೂರು :ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಅಭಿವೃದ್ಧಿ ಹೊಂದಿರುವ ವಿಜಯನಗರ ಬಡಾವಣೆಯಲ್ಲಿ 19 ಸೈಟ್ಗಳನ್ನ ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಚಾಮುಂಡೇಶ್ವರಿ ಜೆಡಿಎಸ್ ಶಾಸಕ ಜಿ. ಟಿ ದೇವೇಗೌಡ ವಿರುದ್ದ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಸ್ನೇಹಮಯಿ ಕೃಷ್ಣ ಅವರು ಬೇನಾಮಿ ಆಸ್ತಿ ದೂರು ನೀಡಿದ್ದಾರೆ. ಇದಲ್ಲದೇ, ಇ -ಮೇಲ್ ಮತ್ತು ಅಂಚೆ ಮೂಲಕ ಇಡಿಗೂ ಸಹ ದೂರು ನೀಡಿದ್ದಾರೆ.
ಮೈಸೂರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಜಿ. ಟಿ ದೇವೇಗೌಡ ದೇವನೂರು ಎರಡನೇ ಹಂತದ ಸರ್ವೆ ನಂ 81/2ಕ್ಕೆ ಸಂಬಂಧಿಸಿದ 2 ಎಕರೆ 22 ಗುಂಟೆ ಜಮೀನನ್ನು ಖರೀದಿ ಮಾಡಿ, ಆ ಜಮೀನಿನ ಮಾಲೀಕರ ಮನೆಗೆ ಹೋಗಿ ಚೆಕ್ ನೀಡುವ ಫೋಟೋಗಳು ಸಿಕ್ಕಿವೆ. ಅವುಗಳನ್ನು ಗಮನಿಸಿದಾಗ ಖರೀದಿ ಮಾಡಿರುವುದು ಜಿ. ಟಿ ದೇವೇಗೌಡರು. ಆದರೆ ಕ್ರಯ ಪತ್ರ ಸಹೋದರಿ ಮಗ ಮಹೇಂದ್ರ ಅವರ ಹೆಸರಿಗೆ ನೋಂದಣಿಯಾಗಿದೆ ಎಂದರು.
ಈ ಜಮೀನಿಗೆ ಪರಿಹಾರ ನೀಡಿಲ್ಲ ಎಂಬ ನೆಪದಲ್ಲಿ ಮಹೇಂದ್ರ ಅವರ ಹೆಸರಿಗೆ 19 ನಿವೇಶನ ಪಡೆದಿರುವುದು ಕಂಡುಬಂದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಎಂದು ಇಡಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ಎಂದು ಹೇಳಿದರು. ಶಾಸಕ ಜಿ. ಟಿ ದೇವೇಗೌಡ ಬೇನಾಮಿ ಆಸ್ತಿ ಹೊಂದಿರುವುದರ ಬಗ್ಗೆ ಸಾಕ್ಷಿ ಇದಾಗಿದೆ. ಹೀಗಾಗಿ ಸಂಪೂರ್ಣ ತನಿಖೆ ಆಗಬೇಕು ಎಂದು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.