ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್​ಗೆ ಸ್ನೇಹಮಯಿ ಕೃಷ್ಣ ಅರ್ಜಿ - Snehamayi Krishna Petition

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

high court
ಸಿದ್ದರಾಮಯ್ಯ, ಹೈಕೋರ್ಟ್, ಸ್ನೇಹಮಯಿ ಕೃಷ್ಣ (ETV Bharat)

By ETV Bharat Karnataka Team

Published : Sep 27, 2024, 5:45 PM IST

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ತಮ್ಮ ಪತ್ನಿ ಹೆಸರಿಗೆ ಅಕ್ರಮವಾಗಿ ಬದಲಿ ನಿವೇಶನ ಪಡೆದ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಕೇಂದ್ರ ಗೃಹ ಇಲಾಖೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬಿಐ, ಲೋಕಾಯುಕ್ತ ಪೊಲೀಸರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸಿದ್ದರಾಮಯ್ಯ, ಮತ್ತವರ ಪತ್ನಿ ಪಾರ್ವತಿ ಮತ್ತಿರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಇನ್ನಷ್ಟೇ ಅರ್ಜಿ ವಿಚಾರಣೆಗೆ ಬರಬೇಕಾಗಿದೆ.

ಪ್ರಕರಣವನ್ನು ರಾಜ್ಯ ಸರ್ಕಾರದ ಪೊಲೀಸರಿಂದ ತನಿಖೆ ನಡೆಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ, ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲವೇ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ

ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರುವ ಸಾಧ್ಯತೆ:ಸಿದ್ದರಾಮಯ್ಯ ಅವರು ರಾಜ್ಯದ ಹಾಲಿ ಮುಖ್ಯಮಂತ್ರಿಗಳಾಗಿದ್ದು, ರಾಜ್ಯದ ಇಲಾಖೆಗಳ ಮೇಲೆ ಅದರಲ್ಲೂ ಮುಖ್ಯವಾಗಿ ಲೋಕಾಯುಕ್ತ ಮತ್ತು ಪೊಲೀಸ್ ಪ್ರಾಧಿಕಾರಗಳ ರಾಜ್ಯ ತನಿಖಾ ಸಂಸ್ಥೆಗಳ ಮೇಲೆ ಭಾರೀ ಪ್ರಭಾವ ಬೀರುವ ಸಾಧ್ಯತೆಯಿದೆ. ಇಂತಹ ಸಂಸ್ಥೆಗಳು ಮುಖ್ಯಮಂತ್ರಿಗಳ ವಿರುದ್ಧದ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವ ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಅವರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರಾಜ್ಯ ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದಿದ್ದಾರೆ.

ಒಂದು ವೇಳೆ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಿದರೆ ತನಿಖೆಯ ಫಲಿತಾಂಶ ನ್ಯಾಯಸಮ್ಮತ ಮತ್ತು ನಿಷ್ಪಕ್ಷ ಪಾತವಾಗಿರುವುದಿಲ್ಲ. ಹೀಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಗಾಗಲೇ ಲೋಕಾಯುಕ್ತ ಪೊಲೀಸರಿಗೆ ವಹಿಸಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಾಮನಿರ್ದೇಶಿಸುವಂತಹ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳೊಬ್ಬರಿಂದ ಸಿಬಿಐ ತನಿಖೆ ಮೇಲ್ವಿಚಾರಣೆ ನಡೆಸಲು ನಿರ್ದೇಶಿಸಬೇಕು. ಅಥವಾ ರಾಜ್ಯಪಾಲರ ಆದೇಶ ಎತ್ತಿಹಿಡಿದು ಹೊರಡಿಸಿರುವ ತೀರ್ಪಿನಲ್ಲಿ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿ ಇರಿಸಿಕೊಂಡು ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ 55.80 ಕೋಟಿ ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಕೋರಿ ಮೊದಲಿಗೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿತ್ತು. ಆದರೆ, ಪೊಲೀಸರು ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು. ಬಳಿಕ ಸಿಬಿಐ ಸೇರಿ ವಿವಿಧ ತನಿಖಾ ಸಂಸ್ಥೆಗಳಿಗೆ ಪ್ರಕರಣದ ತನಿಖೆ ನಡೆಸುವಂತೆ ದೂರು ನೀಡಲಾಗಿತ್ತು. ಆ ದೂರಿನ ಆಧಾರದ ಮೇಲೆ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಎಫ್​ಐಆರ್​ - FIR Against CM Siddaramaiah

ABOUT THE AUTHOR

...view details