ಹುಬ್ಬಳ್ಳಿ:ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಧಿತರಿಂದ ಆರು ಜೀವಂತ ಗುಂಡುಗಳ ಸಹಿತ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ ಜಿಲ್ಲೆಯ ರೋಷನ್ ಜಮೀರ್ ಹಾಗೂ ಹಜರತ್ ಅಲಿ ಬಂಧಿತ ಆರೋಪಿಗಳು. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಅಕ್ರಮವಾಗಿ ಆರೋಪಿಗಳು ಗಾಂಜಾ ಮಾರಾಟಕ್ಕೆ ಮುಂದಾಗಿದ್ದರು. ಈ ವೇಳೆ, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಇಬ್ಬರನ್ನೂ ಬಂಧಿಸಿದ್ದಾರೆ. ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಎಸಿಪಿ ಎಸ್.ಪಿ ಒಡೆಯರ್, ಪಿಎಸ್ಐ ದೇವೆಂದ್ರಪ್ಪ, ಸಿಸಿಬಿ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ, ರಾಜೇಸಾಬ್ ಗುಂಜಾಳ, ಎಸ್ಐ ಕಡೇಮನಿ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
ಮೂವರು ಅಂತಾರಾಜ್ಯ ಮನೆಗಳ್ಳರ ಬಂಧನ:ಮೂವರು ಅಂತಾರಾಜ್ಯ ಮನೆ ಕಳ್ಳರ ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 8,68,000 ರೂ. ಮೌಲ್ಯದ 10.4 ಗ್ರಾಂ ಚಿನ್ನ, 160 ಗ್ರಾಂ ಬೆಳ್ಳಿ ಹಾಗೂ ಒಂದು ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.