ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೀಗಾಗಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತವಾದ ವಾಹನ ನಿಲುಗಡೆಗೆ ಆನುಕೂಲವಾಗುವ ನಿಟ್ಟಿನಲ್ಲಿ ಮಲ್ಟಿ ಲೆವಲ್ ಕಾರು ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿತ್ತು. ಆದರೆ, ದಶಕಗಳು ಕಳೆದರೂ ಈ ಯೋಜನೆ ಸಫಲವಾಗಿಲ್ಲ. ಹೀಗಾಗಿ ಕಠಿಣ ನಿರ್ಧಾರಕ್ಕೆ ಬಂದಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು ಗುತ್ತಿಗೆದಾರನಿಗೆ ಕೋಟ್ಯಂತರ ರೂ. ದಂಡ ಹಾಕಿ ಹಲವು ನೋಟಿಸ್ ನೀಡಿದ್ದಾರೆ.
ಹುಬ್ಬಳ್ಳಿಯ ಸಾಯಿಬಾಬಾ ದೇಗುಲದ ಎದುರಿನ ಕೋರ್ಟ್ ಸರ್ಕಲ್‌ನಲ್ಲಿ ಬಹುಮಟ್ಟದ ಪಾರ್ಕಿಂಗ್ ಕಾಂಪ್ಲೆಕ್ಸ್‌ಗಾಗಿ ಹುಬ್ಬಳ್ಳಿ ನಾಗರಿಕರು ಕಾದು ಕುಳಿತಿದ್ದರು. ಆದರೆ, ಆ ಕನಸು ಕನಸಾಗಿಯೇ ಉಳಿದಿದೆ. ಮಾರ್ಚ್ 2020 ರಲ್ಲಿ ಪ್ರಾರಂಭವಾದ ಮಲ್ಟಿ - ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಪೂರ್ಣಗೊಳ್ಳುವ ಲಕ್ಷಣಗಳು ಮಾತ್ರ ಇನ್ನೂ ಕಾಣುತ್ತಿಲ್ಲ. ಕಳೆದ 4 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಕಟ್ಟಡ ನೆಲಬಿಟ್ಟು ಎದ್ದಿಲ್ಲ. ಇದು ಸ್ಮಾರ್ಟ್ ಸಿಟಿ ಯೋಜನೆಗೆ ತೀವ್ರ ಹಿನ್ನೆಡೆಯನ್ನುಂಟು ಮಾಡಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೊನೆ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಿಷ್ಟು:ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಈಟಿವಿ ಭಾರತ ಜೊತೆ ಮಾತನಾಡಿ, "ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಚ್‌ಡಿಎಸ್‌ಸಿಎಲ್) ಸಾರ್ವಜನಿಕ - ಖಾಸಗಿ ಸಹಭಾಗಿತ್ವ (ಪಿಪಿಪಿ) ಮೋಡ್‌ನಲ್ಲಿ 50 ಕೋಟಿ ವೆಚ್ಚದಲ್ಲಿ (ಎಚ್‌ಡಿಎಸ್‌ಸಿಎಲ್‌ನ 10 ಕೋಟಿ ಷೇರುಗಳನ್ನು ಒಳಗೊಂಡಿದೆ) ನಿರ್ಮಾಣವಾಗುತ್ತಿರುವ ಬಹುಮಹಡಿ ಕಾರು ಪಾರ್ಕಿಂಗ್ ಯೋಜನೆಯಾಗಿದೆ. 2020ರಲ್ಲಿ ಈ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್ ಕಾರಣಾಂತರಗಳಿಂದ ಹಲವಾರು ಅವಕಾಶ ನೀಡಲಾಗಿದೆ."
"ಹುಬ್ಬಳ್ಳಿಯ ಸುರೇಶ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿಯಲ್ಲಿ ಅತ್ಯಂತ ಕಳಪೆ ಪ್ರಗತಿ ಇದೆ. ಈ ಬಹುಮಹಡಿ ಕಟ್ಟಡ ಒಂದು ಸೇಫ್ ಲೇವಲ್ಗೆ ಬರುವವರೆಗೆ ಗುತ್ತಿಗೆ ರದ್ದು ಮಾಡಲು ಸಾಧ್ಯವಾಗಿಲ್ಲ. ಈ ಕುರಿತಂತೆ ಬೋರ್ಡ್ ಮಟ್ಟದಲ್ಲಿ ಚರ್ಚೆ ಆಗಿದೆ. ಈ ಕಟ್ಟಡ ಅತ್ಯಂತ ಮಹತ್ವದ ಜಾಗದಲ್ಲಿ ಇರುವುದರಿಂದ ಗುತ್ತಿಗೆ ರದ್ದು ಮಾಡಿದರೆ ಸಮಸ್ಯೆ ಆಗುವ ಭೀತಿ ಇದೆ. ಹೀಗಾಗಿ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರಿಗೆ 2 ಕೋಟಿ 70 ಲಕ್ಷ ದಂಡ ಹಾಕಿ ಕಾಮಗಾರಿ ಕೂಡಲೇ ಮುಂದುವರೆಸುವಂತೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೆ ಶೇ.25ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಸಾಕಷ್ಟು ನೋಟಿಸ್ ಕೂಡ ಜಾರಿ ಮಾಡಲಾಗಿದೆ" ಎಂದರು.