ಕರ್ನಾಟಕ

karnataka

"ಸಾರಿಗೆ ಸಂಜೀವಿನಿ" ಮೂಲಕ ಉಚಿತ ಹೃದಯ ತಪಾಸಣಾ ಯೋಜನೆ: ಕೆಎಸ್ಆರ್​ಟಿಸಿಗೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ - KSRTC GOT SKOCH NATIONAL AWARD

By ETV Bharat Karnataka Team

Published : 4 hours ago

"ಸಾರಿಗೆ ಸಂಜೀವಿನಿ" ಯೋಜನೆಯಡಿಯಲ್ಲಿ ಉಚಿತವಾಗಿ ಸಿಬ್ಬಂದಿಯ ಹೃದಯ ತಪಾಸಣೆ ಮಾಡುತ್ತಿದ್ದ ಕೆಎಸ್ಆರ್​ಟಿಸಿ ಕಾರ್ಯಕ್ಕೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2024 ದೊರಕಿದೆ.

ಕೆಎಸ್ಆರ್​ಟಿಸಿಗೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ
ಕೆಎಸ್ಆರ್​ಟಿಸಿಗೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ (ETV Bharat)

ಬೆಂಗಳೂರು:ಸಾರಿಗೆ ಸಂಸ್ಥೆಯನ್ನು ಸದೃಢಗೊಳಿಸಲು ಸಾರಿಗೆ ಸಿಬ್ಬಂದಿಯ ಹೃದಯದ ಆರೋಗ್ಯ ಮುಖ್ಯ ಎಂದು ನಿಯಮಿತವಾಗಿ ಸಿಬ್ಬಂದಿಯ ಹೃದಯ ತಪಾಸಣೆ ಉಚಿತವಾಗಿ ಮಾಡಿಸುವ ಕೆಎಸ್ಆರ್​ಟಿಸಿ ಸಾರಿಗೆ ಸಂಜೀವಿನಿ ಯೋಜನೆಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2024 ಒದಗಿ ಬಂದಿದೆ.

ನಿಗಮದ ನೌಕರರಿಗೆ ಹೃದಯ ಸಂಬಂಧಿ ಆರೋಗ್ಯ ತಪಾಸಣೆ ಮತ್ತು ಮುಂಜಾಗ್ರತೆ ವಹಿಸುವ ಉಪಕ್ರಮಗಳಿಗಾಗಿ "ಸಾರಿಗೆ ಸಂಜೀವಿನಿ" ಎಂಬ ಯೋಜನೆ ಜಾರಿಗೆ ತರಲಾಗಿದ್ದು, ಈ ಉಪಕ್ರಮಕ್ಕಾಗಿ ಸ್ಕಾಚ್​ ರಾಷ್ಟ್ರೀಯ ಪ್ರಶಸ್ತಿಲಭಿಸಿದೆ. ದೆಹಲಿ ಮೂಲದ ಸ್ಕಾಚ್​​​ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003ರಿಂದ ಸ್ಕಾಚ್​​​ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತದೆ. ಈ ಬಾರಿ ಕೆಎಸ್ಆರ್​ಟಿಸಿಗೆ ಪ್ರಶಸ್ತಿ ನೀಡಿದೆ.

ಸ್ಕಾಚ್​ ಸಂಸ್ಥೆಯು ದೆಹಲಿಯ, ಸಿಲ್ವರ್ ಓಕ್ ಹಾಲ್, ಇಂಡಿಯಾ ಹ್ಯಾಬಿಟೇಟ್ ಸೆಂಟರ್​ನಲ್ಲಿ ಶನಿವಾರ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಕಾಚ್ ಗ್ರೂಪ್ ಅಧ್ಯಕ್ಷ ಸಮೀರ್ ಕೊಚ್ಚರ್, ಸ್ಕಾಚ್ ಗ್ರೂಪ್ ಉಪಾಧ್ಯಕ್ಷ ಡಾ.ಗುರುಶರಣ್ ಧನ್ಜಾಲ್ ಪ್ರಶಸ್ತಿಯನ್ನು ಪ್ರದಾನಿಸಿದರು. ಸಂಸ್ಥೆಯ ಪರವಾಗಿ ಕೆಎಸ್ಆರ್​ಟಿಸಿ ಮುಖ್ಯ ಕಾನೂನು ಅಧಿಕಾರಿ ವೆಂಕಟೇಶ ಟಿ. ಮತ್ತು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಅಶ್ರಫ್ ಕೆ.ಎಂ ಪ್ರಶಸ್ತಿ ಸ್ವೀಕಾರ ಮಾಡಿದರು.

ಏಷ್ಯಾ ಪೆಸಿಫಿಕ್ ಹೆಚ್ಆರ್​ಎಂ ಕಾಂಗ್ರೆಸ್ ಮತ್ತು ಗೋಲ್ಡನ್ ಸ್ಟಾರ್ ಪ್ರಶಸ್ತಿ:ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಕ್ಕಾಗಿ ಏಷ್ಯಾ ಪೆಸಿಫಿಕ್ ಹೆಚ್.ಆರ್.ಎಂ ಕಾಂಗ್ರೆಸ್ ಪ್ರಶಸ್ತಿ ಮತ್ತು ನಿಗಮದ ಪ್ರತಿಷ್ಠಿತ ಬ್ಯ್ರಾಂಡಿಂಗ್ ಉಪಕ್ರಮಗಳಿಗಾಗಿ ಗೋಲ್ಡನ್ ಸ್ಟಾರ್ ಪ್ರಶಸ್ತಿ ಲಭಿಸಿರುತ್ತದೆ. ಇತ್ತೀಚೆಗೆ ಎಂಜಿ ರಸ್ತೆಯಲ್ಲಿರುವ ಹೋಟೆಲ್​ ತಾಜ್​ ಹೋಟೆಲ್​ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೋಲ್ಕತ್ತ ಇಐಐಎಲ್ಎಂ ಪ್ರೊಫೆಸರ್ ಡಾ. ರಾಮಪ್ರಸಾದ್ ಬ್ಯಾನರ್ಜಿ, ಎಸ್ಎಎಸ್ಐಎ ಹಿರಿಯ ಉಪಾಧ್ಯಕ್ಷ ಮತ್ತು ಬ್ಯುಸಿನೆಸ್ ಮುಖ್ಯಸ್ಥ ಸಂಜಯ್ ರಾಮದಾಸ್ ಕಾಮತ್ ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಕೆಎಸ್ಆರ್​ಟಿಸಿ ಕಾರ್ಯನಿರ್ವಾಹಕ ಅಭಿಯಂತರ ಸೋಮಶೇಖರ್, ಕಾನೂನು ಅಧಿಕಾರಿ ನರಸಿಂಹ ವರ್ಮ.ವಿ, ವಿಭಾಗೀಯ ಸಂಚಾರಿ ಅಧಿಕಾರಿ ಸತೀಶ್ ಕುಮಾರ್.ಎನ್ ಮತ್ತು ಭದ್ರತಾ ಮತ್ತು ಜಾಗೃತಾಧಿಕಾರಿ ಚಂದ್ರೇಗೌಡ ಎ.ಜಿ, ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇದನ್ನೂ ಓದಿ:ಅನುವಂಶಿಕ ಕಾಯಿಲೆಗಳಿಗೆ ಕ್ಲಿನಿಕಲ್ ಚಿಕಿತ್ಸೆಯ ಅಗತ್ಯತೆ ಹೆಚ್ಚಿದೆ: ಸಿಜೆಐ ಡಿ ವೈ ಚಂದ್ರಚೂಡ್ - Dhananjay Chandrachud

ABOUT THE AUTHOR

...view details