ಬೆಂಗಳೂರು:ಅವಕಾಶ ವಂಚಿತರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳು ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಇನ್ನಿತರ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಉನ್ನತ ಶಿಕ್ಷಣ ಪರಿಷತ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ "ನಾಳೆಗಳ ಸಬಲೀಕರಣ ಉತ್ಕೃಷ್ಟತೆಯ ಕಡೆಗೆ ಪಯಣ" ಶೀರ್ಷಿಕೆಯಡಿ ಹಮ್ಮಿಕೊಳ್ಳಲಾದ "ಸಹಭಾಗಿಗಳ ಸಮಾವೇಶ- 2024" ಉದ್ಘಾಟಿಸಿ ಅವರು ಮಾತನಾಡಿದರು.
"ಸಾವಿರಾರು ವಿದ್ಯಾರ್ಥಿಗಳು ಪದವೀಧರರಾಗಿ ಹೊರಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ದೊರಕುವುದು ಕಷ್ಟವಾಗಿದೆ. ಶಿಕ್ಷಣಕ್ಕೆ ಪೂರಕವಾದ ಕೌಶಲ್ಯ ತರಬೇತಿ ಅವರಿಗೆ ಅವಶ್ಯಕ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯು ಇನ್ಫೋಸಿಸ್ ಸ್ಟ್ರಿಂಗ್ ಬೋರ್ಡ್, ಉನ್ನತ ಫೌಂಡೇಶನ್, ಬ್ರಿಟಿಷ್ ಕೌನ್ಸಿಲ್, ವಾದ್ವಾನಿ ಫೌಂಡೇಶನ್, ಟಯೋಟಾ ಕಿರ್ಲೋಸ್ಕರ್, ಕೆಟೆಕ್ ಮೆಟಾ, ಸಿಕ್ಕೋ ಮುಂತಾದ ಖಾಸಗಿ ಕೈಗಾರಿಕೆಗಳು ಮತ್ತು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ" ಎಂದರು.
"ಕಂಪನಿಗಳ ಸಹಭಾಗಿತ್ವದಲ್ಲಿ ಸರ್ಕಾರಿ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಉದ್ಯೋಗಾರ್ಹತೆ ಕೌಶಲ್ಯ, ಜೀವನ ಕೌಶಲ್ಯ, ಆಂಗ್ಲ ಭಾಷೆ ಪ್ರಾವೀಣ್ಯತೆ, ಡಿಜಿಟಲ್, ಸೈಬರ್ ಜಾಗೃತಿ, ಮಹಿಳೆಯರು ಮತ್ತು ಕೃತಕ ಬುದ್ಧಿಮತ್ತೆ ಮುಂತಾದ ವಿಷಯಗಳ ಕುರಿತು ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಈ ಕೌಶಲ್ಯ ತರಬೇತಿ ಉತ್ಕೃಷ್ಟವಾಗಿದ್ದು, ಅವರು ಮಾಡುವ ಉದ್ಯೋಗಕ್ಕೆ ಪೂರಕವಾಗಿದೆ, ಉದ್ಯೋಗವೂ ಸಿಗುವಂತಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅರಸಿ ಪಟ್ಟಣಕ್ಕೆ ಬಂದರೆ ಅವರಿಗೆ ಹೊರಗಿನ ಜಗತ್ತು ತೆರೆದುಕೊಳ್ಳುತ್ತದೆ. ಬ್ರಿಟಿಷ್ ಕೌನ್ಸಿಲ್ ಸಹಕಾರದೊಂದಿಗೆ 6 ವಿಶ್ವವಿದ್ಯಾಲಯಗಳ ಸುಮಾರು 30 ವಿದ್ಯಾರ್ಥಿಗಳು ಹಾಗೂ 6 ಅಧ್ಯಾಪಕರು ಲಂಡನ್‍ಗೆ ಅಧ್ಯಯನ ಪ್ರವಾಸ ಬೆಳೆಸಿ ಜೀವನ ಕೌಶಲ್ಯ, ತರಬೇತಿ ಪಡೆದುಕೊಂಡಿದ್ದಾರೆ" ಎಂದು ಹೇಳಿದರು.