ಬೆಳಗಾವಿ:ಭಗವಾಧ್ವಜ ತೆರವು ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಆರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೋಕಾಕ್ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೆಟಗೇರಿ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಒಂದು ಗುಂಪು ಭಗವಾಧ್ವಜ ಕಟ್ಟಿತ್ತು. ಅಂಬೇಡ್ಕರ್ ಜಯಂತಿ ಹಿನ್ನೆಲೆ ಆ ಧ್ವಜ ತೆರವು ಮಾಡುವಂತೆ ಮತ್ತೊಂದು ಗುಂಪಿನ ಯುವಕರು ಹೇಳಿದ್ದರು. ಆದರೆ, ಅವರು ಧ್ವಜ ತೆರವು ಮಾಡದೇ ಇದ್ದಾಗ ಭಗವಾಧ್ವಜವನ್ನು ಅಂಬೇಡ್ಕರ್ ಕಾಲೋನಿ ನಿವಾಸಿಗಳು ತಾವೇ ತೆರವುಗೊಳಿಸಿದ್ದರು.
ಇದು ಮತ್ತೊಂದು ಗುಂಪಿನ ಸಿಟ್ಟಿಗೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಆ ಗುಂಪಿನವರು ಆನಂದ ತಳವಾರ ಕುಟುಂಬದ ಮೇಲೆ ಮಾರಕಾಸ್ತ್ರಗಳು, ಕಟ್ಟಿಗೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಆನಂದ ತಳವಾರ, ಚಿದಾನಂದ ತಳವಾರ ಸೇರಿ ಅವರ ಕುಟುಂಬದ ಆರು ಜನರ ಮೇಲೆ ಹಲ್ಲೆ ಆಗಿದೆ. ಮನೆ ಬಾಗಿಲು ಮುರಿದು, ಹೆಂಚುಗಳ ಮೇಲೆ ಕಲ್ಲು ತೂರಿ ಗಲಾಟೆ ಮಾಡಲಾಗಿದ್ದು, ಮನೆಯಲ್ಲಿದ್ದ ಸಾಮಗ್ರಿಗಳನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ಲಕ್ಷ್ಮಣ ಚಂದರಗಿ, ಶಂಕರ್ ಚಂದರಗಿ, ಸುರೇಶ ಚಂದರಗಿ, ಅಶೋಕ ಚಂದರಗಿ, ವಿಜಯ ಚಂದರಗಿ ಸೇರಿ 25ಕ್ಕೂ ಹೆಚ್ಚು ಜನರಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಗಾಯಗೊಂಡ ಆರು ಜನರಿಗೆ ಗೋಕಾಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಹಲ್ಲೆಗೊಳಗಾದವರು ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾದ ಚಿದಾನಂದ ತಳವಾರ ಮಾತನಾಡಿ, ನಮ್ಮ ಕೊಲೆ ಮಾಡಲೇಬೇಕು ಎಂದು ಈ ರೀತಿ ಹಲ್ಲೆ ಮಾಡಿದ್ದಾರೆ. ಅವರು ನಮ್ಮನ್ನು ಯಾವ ಪೊಲೀಸರು ಏನೂ ಮಾಡಿಕೊಳ್ಳಲು ಆಗೋದಿಲ್ಲ. ಹತ್ತು ಎಕರೆ ಬೇಕಾದರೂ ಹೋಗಲಿ, ನಿನ್ನ ಜೀವಂತ ಬಿಡುವುದಿಲ್ಲ ಎಂದು ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಅಂಬೇಡ್ಕರ್ ಸರ್ಕಲ್ನಲ್ಲಿ ಪಟಾಕಿ ಸಿಡಿಸಿ, ಘೋಷಣೆ ಕೂಡ ಕೂಗಿದ್ದಾರೆ. ಪೂರ್ವನಿಯೋಜಿತವಾಗಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಅಂತಾ ನೋಡದೇ ಎಲ್ಲರ ಮೇಲೂ ಹಲ್ಲೆ ಮಾಡಿದ್ದಾರೆ. ಇನ್ನು ಗಾಯಗೊಂಡವರು ಪೊಲೀಸ್ ಠಾಣೆಗೆ ಹೋದರೆ ದೂರು ತೆಗೆದುಕೊಳ್ಳದೇ ನಮ್ಮವರನ್ನೇ ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹಲ್ಲೆಗೊಳಗಾದ ಮಹಿಳೆ ಮಾತನಾಡಿ, ಅಂಬೇಡ್ಕರ್ ಜಯಂತಿಗೆ ಧ್ವಜ ಹಾರಿಸಬೇಕು ಎಂದು ತೀರ್ಮಾನ ಆಗಿತ್ತು. ಹಾಗಾಗಿ ಮೊದಲಿದ್ದ ಭಗವಾ ಧ್ವಜ ತೆರವು ಮಾಡುವಂತೆ ಹೇಳಿದ್ದೆವು. ನಾವು ಹೊಲಕ್ಕೆ ಹೋಗಿ ಬಂದ ಮೇಲೆ ಸುಮಾರು 40 ಜನರ ಗುಂಪು ನಮ್ಮ ಮೇಲೆ ಕಲ್ಲು, ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾರೆ. ನಮ್ಮ ಸೀರೆ ಎಳೆದಾಡಿ, ಕೊರಳಲ್ಲಿನ ತಾಳಿ ಕಿತ್ತುಹಾಕಿ, ಕೈಯಲ್ಲಿನ ಬಳೆ ಒಡೆದು ಹಾಕಿದ್ದಾರೆ. ಹೀಗಾಗಿ ಅವರಿಗೆ ಕಠಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಬೆಳಗಾವಿ ಲೋಕಸಭೆಗೆ ಸ್ಪರ್ಧಿಸಿದ್ದರು 455 ಅಭ್ಯರ್ಥಿಗಳು: ಇದು ಇಡೀ ದೇಶದ ಗಮನ ಸೆಳೆದ ಚುನಾವಣೆ - LOK SABHA ELECTION 2024