ತುಮಕೂರು:ಇಲ್ಲಿನ ಕುಚ್ಚಂಗಿ ಗ್ರಾಮದಲ್ಲಿ ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೂವರ ಗುರುತು ಪತ್ತೆಯಾಗಿದೆ. ಈ ಮೂವರು ಬೆಳ್ತಂಗಡಿ ಮೂಲದವರಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಕೋರಾ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಸಾಹುಲ್ ಹಮೀದ್ (45), ಇಸಾಕ್ (56) ಹಾಗೂ ಸಿದ್ದಿಕ್ (34) ಎಂಬುವವರು ಮೃತರು ಎಂದು ಗುರುತಿಸಲಾಗಿದೆ. ಇದರಲ್ಲಿ ಸಾಹುಲ್ ಹಮೀದ್, ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾನ್ ನಿವಾಸಿಯಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇಸಾಕ್ ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಮತ್ತು ಸಿದ್ದಿಕ್ ಶಿರ್ಲಾಲು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಈ ಮೂವರು 12 ದಿನಗಳ ಹಿಂದೆ ದಕ್ಷಿಣ ಕನ್ನಡದ ಮದಡ್ಕದ ರಫೀಕ್ ಎಂಬವರ ಎಸ್ ಪ್ರೆಸ್ಸೊ ಕಾರನ್ನು ಬಾಡಿಗೆ ಪಡೆದುಕೊಂಡು ತುಮಕೂರಿಗೆ ಆಗಮಿಸಿದ್ದರು. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ, ಕಡಿಮೆ ಬೆಲೆಗೆ ಚಿನ್ನವನ್ನು ನೀಡುತ್ತೇವೆ ಎಂದು ದುಷ್ಕರ್ಮಿಗಳು ಸುಳ್ಳು ಹೇಳಿ ಹಣ ದೋಚುವ ಪ್ಲಾನ್ ಮಾಡಿ ಈ ಮೂವರನ್ನು ಕರೆಸಿಕೊಂಡಿದ್ದರು. ಬಳಿಕ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಮೂವರ ಮೃತದೇಹಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿ ಬಳಿಕ ಸಂಬಂಧಿಕರಿಗೆ ಶವ ಹಸ್ತಾಂತರಿಸಲಿದ್ದಾರೆ. ಪ್ರಕರಣ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಪೊಲೀಸರು ಎಲ್ಲ ಆಯಾಮದಲ್ಲೂ ತನಿಖೆ ಕೈಗೊಂಡಿದ್ದಾರೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಹಾಗೂ ಐಜಿ ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ತುಮಕೂರು: ಕಾರೊಂದರಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೂವರು ವ್ಯಕ್ತಿಗಳ ಶವಗಳು ಪತ್ತೆ - Three persons dead body