ಚಿಕ್ಕಮಗಳೂರು/ಶಿವಮೊಗ್ಗ:ಆರು ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯಲಿದೆ.
ಶಾಂತಿಗಾಗಿ ನಾಗರಿಕ ವೇದಿಕೆಯು ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ಫಲಪ್ರದವಾಗಿದ್ದು, ನಾಳೆ ಆರು ಜನ ನಕ್ಸಲ್ ಹೋರಾಟಗಾರರು ಮುಖ್ಯ ವಾಹಿನಿಗೆ ಬರಲಿದ್ದಾರೆ. ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ ವಸಂತ, ಟಿ ಎನ್ ಜೀಶ್ ಅವರು ಬುಧವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಶಾಂತಿಗಾಗಿ ನಾಗರಿಕ ವೇದಿಕೆಯ ಪ್ರಮುಖ ಮುಖಂಡ ಕೆ.ಎಲ್. ಅಶೋಕ್ ಮಾಹಿತಿ ನೀಡಿದ್ದಾರೆ.
ಮಲೆನಾಡಿನಲ್ಲಿ ಜನವಿರೋಧಿ ಅರಣ್ಯ ಕಾಯ್ದೆಗಳನ್ನು ರದ್ದು ಮಾಡುವುದು, ಬಡವರಿಗೆ ಭೂಮಿ ಮತ್ತು ವಸತಿ ಸೌಲಭ್ಯ ಸೇರಿದಂತೆ ಸಂವಿಧಾನ ಬದ್ಧವಾದ ಹಕ್ಕುಗಳನ್ನು ನೀಡುವುದು ಸೇರಿದಂತೆ ನಕ್ಸಲ್ ಹೋರಾಟಗಾರರ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಜೊತೆಗೆ, ಈ ಹಿಂದೆ ಸಮಾಜದ ಮುಖ್ಯವಾಹಿನಿಗೆ ಬಂದ ನಕ್ಸಲ್ ಹೋರಾಟಗಾರರಿಗೆ ಕಾನೂನಿನ ತೊಡಕಾಗಿದೆ ಮತ್ತು ಅವರಿಗೆ ಮೂಲಭೂತ ಸೌಲಭ್ಯ ಒದಗಿಸಲು ಕೂಡ ಸರ್ಕಾರ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ನಡೆಯಲಿದೆ ಎಂದು ಕೆ.ಎಲ್. ಅಶೋಕ್ ತಿಳಿಸಿದರು.
ಆರು ಜನ ನಕ್ಸಲರು ಶರಣಾಗತಿ ಆಗುತ್ತಿಲ್ಲ. ಬದಲಾಗಿ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಇನ್ನು ಮುಂದೆ ಅವರ ಹೋರಾಟದ ಸ್ವರೂಪ ಮತ್ತು ದಿಕ್ಕು ಬದಲಾಗಲಿದೆ. ಇಷ್ಟು ದಿನ ಭೂಗತರಾಗಿ ನಡೆಸಿದ ಹೋರಾಟ ಇನ್ನು ಮುಂದೆ ನಾಗರಿಕ ಸಮಾಜದ ನಡುವೆ ಚಳವಳಿ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಇದೆ ವೇಳೆ ಅವರು ಸ್ಪಷ್ಟಪಡಿಸಿದರು.
ಈ ಹಿಂದೆ ಆದ ದೋಷ ಮರುಕಳಸದಂತೆ ಮನವಿ :ಈ ಹಿಂದೆ ಶರಣಾಗತಿ ಆಗಿದ್ದ ನಕ್ಸಲ್ ಹೋರಾಟಗಾರರನ್ನು ರಾಜ್ಯ ಸರ್ಕಾರ ನಡೆಸಿಕೊಂಡ ರೀತಿ ಹಾಗೂ ಅವರಿಗೆ ಸೌಲಭ್ಯ ಕಲ್ಪಿಸದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಕೆ. ಎಲ್. ಅಶೋಕ್, ಈ ಬಾರಿ ಆ ರೀತಿ ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಾರಿ ಲಿಖಿತ ರೂಪದಲ್ಲಿ ರಾಜ್ಯ ಸರ್ಕಾರ ಭರವಸೆ ನೀಡುತ್ತಿದೆ ಎಂದು ತಿಳಿಸಿದರು.
ವಕೀಲ ಶ್ರೀಪಾಲ್ ಹೇಳಿದ್ದು ಹೀಗೆ;ಚಿಕ್ಕಮಗಳೂರಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೂಡಗಿಸಿಕೊಂಡಿದ್ದ 6 ಜನ ಮುಖ್ಯವಾಹಿನಿಗೆ ಬರಲಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 6 ಜನ ನಕ್ಸಲ್ ಪ್ಯಾಕೇಜ್ ನಲ್ಲಿ ಮುಖ್ಯವಾಹಿನಿಗೆ ಬರಲಿದ್ದಾರೆ ಎಂದು ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯ, ವಕೀಲ ಶ್ರೀಪಾಲ್ ಈಟಿವಿ ಭಾರತ್ ಗೆ ದೂರವಾಣಿಯ ಮೂಲಕ ತಿಳಿಸಿದ್ದಾರೆ. ಒಟ್ಟು 7 ಜನರ ತಂಡ ಸಮಾಜದ ಮುಖ್ಯವಾಹಿನಿಗೆ ಬರಬೇಕಿತ್ತು. ಆದರೆ ಸದ್ಯಕ್ಕೆ ಜನರು ಮಾತ್ರ ಶರಣಾಗತಿ ಪ್ಯಾಕೇಜ್ ನಲ್ಲಿ ಬರಲಿದ್ದಾರೆ. ಇನ್ನೋರ್ವರು ಮುಂದಿನ ದಿನಗಳಲ್ಲಿ ಸೇರ್ಪಡೆಯಾಗಬಹುದು ಎಂದು ತಿಳಿಸಿದರು.
ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಗತಿಪರರು ಸರ್ಕಾರದೊಂದಿಗೆ ಮಾತುಕತೆ ನಡೆಸಿ, ದಶಕಗಳ ಕಾಲ ಕಾಡಿನಲ್ಲಿದ್ದು ಸರ್ಕಾರದೊಂದಿಗೆ ಸಂಘರ್ಷ ನಡೆಸುತ್ತಿದ್ದವರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ. ಇದಕ್ಕಾಗಿ ನಕ್ಸಲ್ ಶರಣಾಗತಿ ಸಮಿತಿ ರಚನೆಯನ್ನು ಸರ್ಕಾರವೇ ರಚನೆ ಮಾಡಿದೆ. ಇದರಲ್ಲಿ ನಾಡಿನ ಪ್ರಗತಿಪರರು, ನಕ್ಸಲ್ ಪರ ಒಲವುಳ್ಳವರನ್ನು ನೇಮಿಸಲಾಗಿದೆ. ಈ ತಂಡದಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದವರನ್ನು ಮುಖ್ಯವಾಹಿನಿಗೆ ಬರಲು ಇಚ್ಛಿಸುವವರು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ.