ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಟಿ. ಬೇಗೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಕಂಟೇನರ್ವೊಂದು ಡಿವೈಡರ್ ಹಾರಿ ಕಾರಿನ ಮೇಲೆ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೂವರು ಮಕ್ಕಳು, ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಉದ್ಯಮಿ ಚಂದ್ರಂ ಯೆಗಪಗೋಳ್ (48), 16 ವರ್ಷದ ಜಾನ್, 12 ವರ್ಷದ ದೀಕ್ಷಾ, 6 ವರ್ಷದ ಆರ್ಯ, 36 ವರ್ಷದ ವಿಜಯಲಕ್ಷ್ಮಿ, 42 ವರ್ಷದ ಗೌರಬಾಯಿ ಮೃತ ದುರ್ದೈವಿಗಳು.
ನೆಲಮಂಗಲ ಬಳಿ ಭೀಕರ ಅಪಘಾತ (ETV Bharat) ಭೀಕರ ಅಪಘಾತ ಸಂಭವಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಮಾರು 10 ಕಿಲೋ ಮೀಟರ್ವರೆಗೂ ಸಂಚಾರಕ್ಕೆ ಅಡ್ಡಿಯಾಗಿತ್ತು. ತಕ್ಷಣವೇ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ ತಿಳಿಸಿದ್ದಾರೆ.
ಕಂಟೇನರ್ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಮೃತದೇಹಗಳು ಕೂಡ ಛಿದ್ರವಾಗಿವೆ. KA 01 ND 1536 ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಅಪಘಾತ ನಡೆದ ಸ್ಥಳ (ETV Bharat) ಕಿಸ್ಮಸ್ ಹಬ್ಬದ ರಜೆ ಹಿನ್ನೆಲೆಯಲ್ಲಿ ಊರಿಗೆ ಹೊರಟಿದ್ದ ಕುಟುಂಬ:ಬೆಂಗಳೂರಲ್ಲಿ ವಾಸವಾಗಿದ್ದ ಕುಟುಂಬ ಕ್ರಿಸ್ಮಸ್ ಹಬ್ಬದ ರಜೆ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:ಜೈಪುರ - ಅಜ್ಮೀರ್ ಹೈವೇಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ : ಐದು ಮಂದಿ ಸಜೀವ ದಹನ, 37 ಜನರಿಗೆ ಗಾಯ
ಮೃತರು ವಿಜಯಪುರ -ಮಹಾರಾಷ್ಟ್ರ ಗಡಿ ಭಾಗದವರೆಂದು ಗುರುತಿಸಲಾಗಿದೆ. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದ ಕುಟುಂಬಸ್ಥರು ಕ್ರಿಸ್ಮಸ್ ರಜೆ ಹಿನ್ನೆಲೆ ತಮ್ಮ ಸ್ವಗ್ರಾಮಕ್ಕೆ ವೋಲ್ವೋ ಕಾರಿನಲ್ಲಿ ತೆರಳುತ್ತಿದ್ದರು. ಬೆಂಗಳೂರಿನಿಂದ ತುಮಕೂರು ಕಡೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕಂಟೈನರ್ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ವೋಲ್ವೋ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಕಾರಲ್ಲಿದ್ದ ಮೂವರು ಮಕ್ಕಳು ಸೇರಿದಂತೆ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣವೇ ಅವರನ್ನು ಕಾರಿನಿಂದ ತೆಗೆದು ಸಾಗಿಸಿದ್ದೇವೆ. ಕಂಟೇನರ್ ಚಾಲಕನಿಗೂ ತೀವ್ರ ಗಾಯಗಳಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಚಂದ್ರ ಯಗಪಗೋಳ ಅವರು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ರಾಷ್ಟ್ರೀಯ ಹೆದ್ದಾರಿ ಮಧ್ಯೆ ಅಪಘಾತ ಸಂಭವಿಸಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಳಿಸಿದ್ದೆವು. ಬಳಿಕ ಎಲ್ಲವನ್ನೂ ತೆರವುಗೊಳಿಸಿ, ಸಂಚಾರಕ್ಕೆ ಅನುಮತಿ ನೀಡಿದ್ದೇವೆ - ಸಿ.ಕೆ. ಬಾಬಾ, ಎಸ್ಪಿ
ಇದನ್ನೂ ಓದಿ: ಕೋಲಾರ: 3 ಬೈಕ್ಗಳಿಗೆ ಬೊಲೆರೋ ವಾಹನ ಡಿಕ್ಕಿ, ಐವರು ಸ್ಥಳದಲ್ಲೇ ಸಾವು
ಮೃತ ಚಂದ್ರಂ ಯೆಗಪಗೋಳ್ ಹಾಗೂ ಗೌರಾ ಬಾಯಿ 2018ರಲ್ಲಿ ಹೆಚ್ಎಸ್ಆರ್ ಲೇಔಟ್‌ನ 6ನೇ ಹಂತದಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ಆರಂಭಿಸಿದ್ದರು. ಕಂಪನಿಯಲ್ಲಿ ಸುಮಾರು 150ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.