ಬೆಂಗಳೂರು:ಅಶ್ಲೀಲ ವಿಡಿಯೋ ವೈರಲ್, ಲೈಂಗಿಕ ದೌರ್ಜನ್ಯ ಸೇರಿ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ಬರುತ್ತಿದ್ದು, ಜರ್ಮನಿಯಿಂದ ಇಂದು ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಜ್ವಲ್ ಬೆಂಗಳೂರಿಗೆ ಬರುತ್ತಿರುವುದು ದೃಢವಾಗುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಬಂಧಿಸಿ ವಿಚಾರಣೆ ನಡೆಸಲು ಸನ್ನದ್ಧರಾಗಿದ್ದಾರೆ. ಕೆಲ ದಿನಗಳಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿರುವ ಎಸ್ಐಟಿ ಅಧಿಕಾರಿಗಳು, ವಿಮಾನದಿಂದ ಕೆಳಗಿಳಿದು ಬರುತ್ತಿದ್ದಂತೆ ಅವರನ್ನು ಬಂಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ಅರ್ಧ ಗಂಟೆ ತಡವಾದ ಹಿನ್ನೆಲೆ 4 ಗಂಟೆ ಸುಮಾರಿಗೆ ಜರ್ಮನಿಯ ಮ್ಯೂನಿಚ್ನಿಂದ ಲೂಫ್ತಾನ್ಸಾ ವಿಮಾನದಲ್ಲಿ ಪ್ರಜ್ವಲ್ ಹೊರಟಿರುವುದನ್ನು ಎಸ್ಐಟಿ ಖಚಿತಪಡಿಸಿಕೊಂಡಿದೆ. ಇಂದು ಮಧ್ಯರಾತ್ರಿ 1 ಗಂಟೆ ಸಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅವರು ಆಗಮಿಸುವ ಸಾಧ್ಯತೆಯಿದೆ.
ಪ್ರಜ್ವಲ್ ಬಂದ ಬಳಿಕ ಎಸ್ಐಟಿ ಮಾಡೋದೇನು?ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಜ್ವಲ್ ಅವರನ್ನು ಬಂಧಿಸಿ ಸಿಐಡಿ ಕಚೇರಿಗೆ ಕರೆತರಲಾಗುತ್ತದೆ. ಶುಕ್ರವಾರ ಬೆಳಗ್ಗೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಿರುವ ಅಧಿಕಾರಿಗಳು, ಮಧ್ಯಾಹ್ನದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನ್ಯಾಯಾಲಯದಲ್ಲಿ ಪ್ರಜ್ವಲ್ ಮೇಲಿನ ಆರೋಪಗಳ ಬಗ್ಗೆ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಆ ಬಳಿಕ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಹೊಳೆನರಸಿಪುರ ಹಾಗೂ ಸಿಐಡಿ ಸೈಬರ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿತ ಪ್ರಶ್ನೆಗಳನ್ನು ಸಹ ಕೇಳಲಿದ್ದಾರೆ ಎಂದು ತಿಳಿದುಬಂದಿದೆ.