ಬೆಂಗಳೂರು:ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ತನಿಖಾಧಿಕಾರಿಗಳ ಮುಂದೆ ಹಾಜರಾಗುವುದಾಗಿ ಅಜ್ಞಾತ ಸ್ಥಳದಿಂದ ಸೋಮವಾರ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು.
ಮೇ 31ರಂದು ಬೆಳಗ್ಗೆ 10 ಗಂಟೆಗೆ ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ ಅದಕ್ಕೂ ಮುನ್ನವೇ ಪ್ರಜ್ವಲ್ ರೇವಣ್ಣ ಅವರನ್ನ ವಶಕ್ಕೆ ಪಡೆದುಕೊಳ್ಳಲು ಎಸ್ಐಟಿ ಕಾರ್ಯತಂತ್ರ ರೂಪಿಸುತ್ತಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಅದರ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ಐಟಿ ತಂಡವನ್ನು ರಚಿಸಿದೆ. ಈಗಾಗಲೇ ಪ್ರಜ್ವಲ್ ವಿರುದ್ಧ ಬಂಧನದ ವಾರೆಂಟ್, ಲುಕ್ ಔಟ್ ನೋಟಿಸ್ ಸಹ ಜಾರಿ ಮಾಡಲಾಗಿದೆ. ಅಲ್ಲದೆ ಬ್ಲ್ಯೂ ಕಾರ್ನರ್ ನೋಟಿಸ್ ಸಹ ಜಾರಿಯಲ್ಲಿರುವುದರಿಂದ ಕಳೆದ ಒಂದು ತಿಂಗಳಿನಿಂದಲೂ ಎಸ್ಐಟಿ ಅಧಿಕಾರಿಗಳ ತಂಡ ಏರ್ಪೋರ್ಟ್ನಲ್ಲೇ ಬೀಡುಬಿಟ್ಟಿದೆ.
ಬ್ಲ್ಯೂ ಕಾರ್ನರ್ ನೋಟಿಸ್ ಜಾರಿಯಲ್ಲಿರುವುದರಿಂದ ಏರ್‌ಪೋರ್ಟ್ ಅಥವಾ ಸೀ ಪೋರ್ಟ್ ಮಾರ್ಗವಾಗಲಿ ಪ್ರಜ್ವಲ್ ರೇವಣ್ಣ ಅವರು ಭಾರತಕ್ಕೆ ಪ್ರವೇಶಿಸುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಳ್ಳುವ ಅವಕಾಶಗಳು ಅಧಿಕವಾಗಿವೆ. ವಶಕ್ಕೆ ಪಡೆದ ಬಳಿಕ ಅವರನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗೆ ಇಮಿಗ್ರೇಷನ್ ಅಧಿಕಾರಿಗಳು ಒಪ್ಪಿಸಲಿದ್ದಾರೆ. ಆದ್ದರಿಂದ ಪ್ರಜ್ವಲ್ ರೇವಣ್ಣ ಅವರು ಹೇಳಿರುವಂತೆ ತಾವೇ ಖುದ್ದು ಎಸ್ಐಟಿ ಮುಂದೆ ಹಾಜರಾಗುವ ಅವಕಾಶಗಳು ವಿರಳ.
ಇನ್ನು ವಶಕ್ಕೆ ಪಡೆದ ಬಳಿಕ ಪ್ರಜ್ವಲ್ ರೇವಣ್ಣ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ನಂತರ ನ್ಯಾಯಾಲಯ ಅಥವಾ ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸಲಾಗುತ್ತದೆ. ಬಳಿಕ ಅವರನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮಾಡಲಾಗುತ್ತದೆ.
ಇದನ್ನೂ ಒದಿ:ಮೇ 31 ರಂದು ಎಸ್ಐಟಿ ಎದುರು ಪ್ರಜ್ವಲ್ ಹಾಜರಾಗುವ ವಿಚಾರ ಸ್ವಾಗತಿಸಿದ ಗೃಹ ಸಚಿವ ಪರಮೇಶ್ವರ್ - G Prameshwar