ದೊಡ್ಡಬಳ್ಳಾಪುರ:ಹೋರಾಟಕ್ಕಿರುವ ಶಕ್ತಿಯನ್ನ ಪ್ರಪಂಚಕ್ಕೆ ತೋರಿಸಿಕೊಟ್ಟವರು ಮಹಾತ್ಮ ಗಾಂಧಿ. ಇಂದು ಗಾಂಧಿಯವರ ಹುಟ್ಟಿದ ದಿನ. ವಿಶ್ವದಾದ್ಯಂತ ಗಾಂಧೀಜಿ ಜಯಂತಿ ಆಚರಿಸಲಾಗಿದೆ. ಶುದ್ಧ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಗಾಂಧಿ ಹೋರಾಟ ದಾರಿಯನ್ನೇ ತುಳಿದಿರುವ ಗ್ರಾಮಸ್ಥರು ಇಂದು ಸಹ ಉಪವಾಸ ಸತ್ಯಾಗ್ರಹ ನಡೆಸಿದರು. ಕೆರೆಯಲ್ಲಿ ತೆಪ್ಪದ ಮೇಲೆ ಕೂತ ಹೋರಾಟಗಾರರು ಮಳೆನೀರು ಕ್ಲೊಯು, ಶುದ್ಧ ನೀರು ಕೊಡುವಂತೆ ಆಗ್ರಹಿಸಿದರು.
ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳು ವಿಷವಾಗಿವೆ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಮತ್ತು ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ಕೆರೆಯ ಒಡಲು ಸೇರಿ ಕುಲುಷಿತಗೊಂಡಿದೆ. ಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ನೀರು ವಿಷವಾಗಿದೆ. ಶುದ್ಧ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಗ್ರಾಮಸ್ಥರ ಬೇಡಿಕೆಗಳು ಈಡೇರದ ಹಿನ್ನಲೆ ಗಾಂಧಿ ಜಯಂತಿ ದಿನವಾದ ಇಂದು ಗಾಂಧಿ ಹಾದಿಯಲ್ಲಿ ಹೋರಾಟ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ದೊಡ್ಡತುಮಕೂರು ಕೆರೆಯ ಬಳಿ ಸೇರಿದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನು ನಡೆಸಿದರು. ಕೆರೆಯಲ್ಲಿ ತೆಪ್ಪಗಳ ಮೇಲೆ ಕುಳಿತ ಹೋರಾಟಗಾರರು, ''ಉಳಿಸಿ ಉಳಿಸಿ ಕೆರೆಗಳನ್ನು ಉಳಿಸಿ.. ಶುದ್ಧ ನೀರು ನಮ್ಮ ಹಕ್ಕು.. ಕೆರೆ ಇರುವುದು ಮಳೆ ನೀರು ಶೇಖರಣೆಗಾಗಿ'' ಎಂದು ಘೋಷಣೆಗಳನ್ನು ಕೂಗುವ ಮೂಲಕ ಸತ್ಯಾಗ್ರಹ ನಡೆಸಿದರು.
ಶುದ್ಧ ನೀರಿಗಾಗಿ ಆಗ್ರಹಿಸಿ ಹೋರಾಟ:ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಹೋರಾಟಗಾರರಾದ ವಸಂತ್, ''ಶುದ್ಧ ನೀರಿಗಾಗಿ ಆಗ್ರಹಿಸಿ ನಾವು ಕಳೆದ ಮೂರು ವರ್ಷಗಳಿಂದ ಗಾಂಧಿ ತತ್ವದ ಮೇಲೆ ಸಂವಿಧಾನ ಬದ್ಧವಾಗಿ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಆದರೆ, ಅಧಿಕಾರಿಗಳು ನೀಡಿದ ಅಶ್ವಾಸನೆಗಳು ಕಾಗದಲ್ಲಿಯೇ ಉಳಿದಿದೆ. ಅರ್ಕಾವತಿ ನದಿ ಕಲುಷಿತವಾಗುವುದರಿಂದ ಸುಮಾರು ಒಂದು ಕೋಟಿಗೂ ಹೆಚ್ಚು ಜನರಿಗೆ ತೊಂದರೆಯಾಗುತ್ತಿದೆ. ಇದರ ಗಂಭೀರತೆ ಅಧಿಕಾರಿಗಳಿಗಿಲ್ಲ'' ಎಂದರು.