ಕರ್ನಾಟಕ

karnataka

ETV Bharat / state

ಹೆಚ್​ ಡಿ ರೇವಣ್ಣ ಜಾಮೀನು ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಎಸ್​ಐಟಿ - HD Revanna Bail cancel plea

ಹೆಚ್​ ಡಿ ರೇವಣ್ಣ ಅವರಿಗೆ ಮಂಜೂರು ಮಾಡಿದ್ದ ಜಾಮೀನು ರದ್ದುಕೋರಿ ಹೈಕೋರ್ಟ್​​ಗೆ ಎಸ್​ಐಟಿ ಅರ್ಜಿ ಸಲ್ಲಿಸಿದೆ.

ಹೆಚ್​ ಡಿ ರೇವಣ್ಣ
ಹೆಚ್​ ಡಿ ರೇವಣ್ಣ (ETV Bharat)

By ETV Bharat Karnataka Team

Published : May 28, 2024, 7:05 PM IST

ಬೆಂಗಳೂರು:ಲೈಂಗಿಕ ಕಿರುಕುಳ ಮತ್ತು ಮಹಿಳೆಯ ಅಪಹರಣ ಆರೋಪದಲ್ಲಿ ಶಾಸಕ ಹೆಚ್​.ಡಿ.ರೇವಣ್ಣ ಅವರಿಗೆ ಮಂಜೂರಾಗಿರುವ ಜಾಮೀನು ರದ್ದುಕೋರಿ ವಿಶೇಷ ತನಿಖಾ ದಳ (ಎಸ್​ಐಟಿ) ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಎಸ್​ಐಟಿ ಸಲ್ಲಿಸಿರುವ ಅರ್ಜಿ ಮೇ 31ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಅಪಹರಣ ಪ್ರಕರಣವು ಗಂಭೀರ ಸ್ವರೂಪದಿಂದ ಕೂಡಿದೆ. ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರವೂ ಇದೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಆರೋಪಿಗಳ ಹಾಗೂ ಸಾಕ್ಷಿಗಳ ಹೆಚ್ಚಿನ ವಿಚಾರಣೆ ನಡೆಸಬೇಕಿದೆ. ಆರೋಪಿಗೆ ಜಾಮೀನು ಲಭ್ಯವಾಗಿರುವುದರಿಂದ ತನಿಖೆ ಮೇಲೆ ಪ್ರಭಾವ ಬೀರಬಹುದು. ಹಾಗಾಗಿ, ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ಎಸ್‌ಐಟಿ ಪೊಲೀಸರು ಕೋರಿದ್ದಾರೆ. ಈ ಅರ್ಜಿಯಲ್ಲಿ ಆರೋಪಿ ಹೆಚ್‌.ಡಿ. ರೇವಣ್ಣ ಅವರನ್ನು ಪ್ರತಿವಾದಿ ಮಾಡಲಾಗಿದೆ. ಈ ಅರ್ಜಿಗಳು ಶೀಘ್ರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಎಫ್ಐಆರ್​ ರದ್ದುಕೋರಿ ರೇವಣ್ಣ ಅರ್ಜಿ: ಈ ನಡುವೆ ಹೊಳೆನರಸೀಪುರ ಮತ್ತು ಕೆ.ಆರ್​.ನಗರ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿರುವ ಎಫ್​ಐಆರ್​ ರದ್ದುಪಡಿಸುವಂತೆ ಕೋರಿ ಹೆಚ್.ಡಿ.ರೇವಣ್ಣ ಅವರು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಾಗಿದೆ.

ತಾವು ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ. ಪ್ರಕರಣದಲ್ಲಿ ಹುರಳಿಲ್ಲ. ದೂರಿನ ಅಂಶಗಳು ಕಟ್ಟುಕತೆಯಂತಿದೆ. ಆದ್ದರಿಂದ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ರೇವಣ್ಣ ಕೋರಿದ್ದಾರೆ. ಹಾಗೆಯೇ, ಅರ್ಜಿ ಇತ್ಯರ್ಥವಾಗುವವರೆಗೂ ಎಫ್‌ಐಆರ್‌, ಪ್ರಕರಣದ ತನಿಖೆ ಹಾಗೂ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ರೇವಣ್ಣ ಮಧ್ಯಂತರ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ:ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಎದುರಾಗುತ್ತಿದ್ದಂತೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದರು. ಈ ಕುರಿತು ಮಹಿಳೆಯ ಮಗ, ಕೆ.ಆರ್​.ನಗರದ ಪೊಲೀಸ್​ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು.

ಹಾಗೆಯೇ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್​ ರೇವಣ್ಣ ಮತ್ತು ಹೆಚ್​ ರೇವಣ್ಣ ವಿರುದ್ಧ ಮತ್ತೋರ್ವ ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಈ ನಡುವೆ, ಇಡೀ ಪೆನ್​ ​ಡ್ರೈವ್​ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳವನ್ನು ಸರ್ಕಾರ ರಚನೆ ಮಾಡಿ ಆದೇಶಿಸಿತ್ತು. ಎರಡೂ ಪ್ರಕರಣಗಳಲ್ಲಿ ಹೆಚ್​.ಡಿ.ರೇವಣ್ಣ ಅವರಿಗೆ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಎರಡೂ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ರದ್ದು ಮಾಡುವಂತೆ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.

ಇದನ್ನೂ ಓದಿ: ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಕೋರ್ಟ್​ - BHAVANI REVANNA BAIL PLEA

ಮಹಿಳೆಅಪಹರಣ ಪ್ರಕರಣದಲ್ಲಿ ಮೇ 4 ರಂದು ಹೆಚ್​.ಡಿ ರೇವಣ್ಣ ಅವರನ್ನು ಎಸ್​ಐಟಿ ಬಂಧಿಸಿತ್ತು. 5 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೇವಣ್ಣ ಅವರಿಗೆ ಮೇ 13 ರಂದು ಜಾಮೀನು ಮಂಜೂರಾಗಿತ್ತು. ನಂತರ ಮೇ 14 ರಂದು ಜೈಲಿನಿಂದ ರೇವಣ್ಣ ಹೊರಬಂದಿದ್ದಾರೆ.

ಇನ್ನೊಂದೆಡೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದು, ಮೇ 31 ರಂದು ಎಸ್​ಐಟಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಏಪ್ರಿಲ್ 26ರ ಲೋಕಸಭೆ ಮತದಾನದ ಬಳಿಕ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದು, ಆ ಬಳಿಕ ಪ್ರಕರಣ ದಾಖಲಾಗಿ ಎಸ್​ಐಟಿ ತನಿಖೆ ನಡೆಸುತ್ತಿದೆ. ಒಂದು ತಿಂಗಳ ಬಳಿಕ ಮೇ 27 ರಂದು ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಮೇ 31ರಂದು ವಾಪಸ್ ಬಂದು ಎಸ್​ಐಟಿ ವಿಚಾರಣೆಗೆ ಹಾಜರಾಗುವುದಾಗಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ; ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆಯಲು ಎಸ್ಐಟಿ ಕಾರ್ಯತಂತ್ರ - Prajwal Revanna

ABOUT THE AUTHOR

...view details