ಬೆಂಗಳೂರು: ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿರ್ತಾರೆ. ಅವರಿಗೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದವಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಸದಾಶಿವನಗರದ ನಿವಾಸದಲ್ಲಿಂದು ಅವರು ಮಾತನಾಡಿದರು.
ಜಾತಿ ಗಣತಿ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು. ಕೇಂದ್ರ ಸರ್ಕಾರ ಗಣತಿಗೆ ಮುಂದಾಗಿದ್ದು, ಒಂದು ವರ್ಷದೊಳಗೆ ಕೆಲಸ ಮುಗಿಯಲಿದೆ. ಅದಕ್ಕೆ ಅಧಿಕೃತ ಸ್ಥಾನಮಾನವೂ ಸಿಗಲಿದೆ. ಅಲ್ಲಿಯವರೆಗೆ ಕಾಯಬೇಕು ಎಂದರು.
ಚನ್ನಪಟ್ಟಣ ಉಪಚುನಾವಣೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಉದ್ಯಮಿಯಿಂದ 50 ಕೋಟಿ ರೂ. ಡಿಮ್ಯಾಂಡ್ ಮಾಡಿರುವ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜ್ಯದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ. ರಾಜ್ಯದಲ್ಲಿ ಜನ ಕಾಂಗ್ರೆಸ್ಗೆ ಅವಕಾಶ ಮಾಡಿಕೊಟ್ಟರೆ, ದೇಶದಲ್ಲಿ ಬಿಜೆಪಿಗೆ ಅಭಿವೃದ್ಧಿ ಮಾಡಲೆಂದು ಅವಕಾಶ ನೀಡಿದ್ದಾರೆ. ಆದರೆ, ದೂಷಣೆಗಳೇ ಹೆಚ್ಚಾಗಿವೆ. ಇದರಿಂದ ಕನ್ನಡಿಗರಿಗೆ ಮುಜುಗರ ತರುತ್ತಿದ್ದಾರೆ. ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬೀದಿಗಿಳಿದು ಕಿತ್ತಾಡುವುದು ಸರಿಯೇ?. ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.