ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿವೇಚನೆ ಬಳಸಿಯೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯಪಾಲರ ಪರ ವಕೀಲರು ಹೈಕೋರ್ಟ್ನಲ್ಲಿ ಸಮರ್ಥನೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದುಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ರಾಜ್ಯಪಾಲರು ಮತ್ತು ದೂರುದಾರರ ಪರ ವಾದ ಆಲಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
ವಿಚಾರಣೆ ವೇಳೆ ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಕರಣದಲ್ಲಿ ರಾಜ್ಯಪಾಲರು ವಿವೇಚನೆ ಬಳಸಿಲ್ಲ, ಸಹಜ ನ್ಯಾಯ ಪಾಲನೆ ಮಾಡಿಲ್ಲ ಎಂಬ ಅರ್ಜಿದಾರರ ಆಕ್ಷೇಪಗಳಿಗೆ ದಾಖಲೆಗಳ ಸಹಿತ ವಿವರಿಸಿದರು.
ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ರಾಜ್ಯಪಾಲರು ವಿವೇಚನೆ ಬಳಸಿಲ್ಲ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಡಿ ಮಾನದಂಡ ಪಾಲನೆ ಮಾಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ, ಸೆಕ್ಷನ್ 17ಎ ಅಡಿಯಲ್ಲಿ ಮೇಲ್ನೋಟಕ್ಕೆ ಅಪರಾಧ ಅಂಶಗಳು ಕಂಡು ಬರುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಾಗುತ್ತದೆ. ಈ ಹಂತದಲ್ಲಿ ಶೋಕಾಸ್ ನೋಟಿಸ್ ನೀಡಲೇಬೇಕೆಂಬ ನಿಯಮವಿಲ್ಲ. ಟಿ.ಜೆ.ಅಬ್ರಹಾಂ ಅರ್ಜಿ ಸಂಬಂಧ ಶೋಕಾಸ್ ನೋಟಿಸ್ ನೀಡಿ, ಉಳಿದ ಇಬ್ಬರ ಅರ್ಜಿದಾರರ ಅರ್ಜಿಗಳ ಸಂಬಂದ ಶೋಕಾಸ್ ನೋಟಿಸ್ ನೀಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳುತ್ತಿದ್ದಾರೆ. ಆದರೆ, ಮೂವರು ಒಂದೇ ರೀತಿಯ ಆರೋಪದಲ್ಲಿ ಅನುಮತಿ ಕೇಳಿದ್ದು, ಎಲ್ಲ ಪ್ರಕರಣಗಳಲ್ಲಿಯೂ ಅನುಮತಿ ಕೇಳಬೇಕು ಎಂಬ ನಿಯಮವಿಲ್ಲ ಎಂದು ಅವರು ವಿವರಿಸಿದರು.
ಅಲ್ಲದೆ, ಮೂರೂ ದೂರುಗಳಲ್ಲಿ ಒಂದೇ ಆರೋಪ ಇರುವುದರಿಂದ ರಾಜ್ಯಪಾಲರು ತುಲನಾತ್ಮಕ ಚಾರ್ಟ್ ಸಿದ್ಧಪಡಿಸಿದ್ದಾರೆ. ಹೀಗಾಗಿಯೇ ಉಳಿದಿಬ್ಬರ ದೂರಿನಲ್ಲಿ ಶೋಕಾಸ್ ನೋಟಿಸ್ ನೀಡುವ ಅಗತ್ಯವಿಲ್ಲ. ಅಲ್ಲದೆ, ಸಚಿವ ಸಂಪುಟದ ನಿರ್ಣಯ ಪರಿಗಣಿಸಿಲ್ಲ ಎಂಬ ಬಗ್ಗೆಯೂ ರಾಜ್ಯಪಾಲರು ತಮ್ಮ ಆದೇಶದಲ್ಲಿ ವಿವರವಾಗಿ ಹೇಳಿದ್ದಾರೆ. ಸಂಪುಟ ಸಚಿವರನ್ನು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಿಯೋಜನೆ ಮಾಡಲಾಗುತ್ತದೆ. ಆ ಸಚಿವರು ಮುಖ್ಯಮಂತ್ರಿಗೆ ನಿಷ್ಠರಾಗಿರುತ್ತಾರೆ. ಮುಖ್ಯಮಂತ್ರಿ ವಿರುದ್ಧ ಆರೋಪ ಬಂದಾಗ, ಆ ಸಚಿವ ಸಂಪುಟದ ಸಚಿವರ ಸಲಹೆ ಹಾಗೂ ಶಿಫಾರಸ್ಸನ್ನು ರಾಜ್ಯಪಾಲರು ಒಪ್ಪಬೇಕಿಲ್ಲ ಹಾಗೂ ಪರಿಗಣಿಸಬೇಕಿಲ್ಲ. ಆದರೂ ಸಚಿವ ಸಂಪುಟದ ಸಲಹೆಯನ್ನು ರಾಜ್ಯಪಾಲರು ಪರಿಶೀಲಿಸಿ ಉತ್ತರಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸದಿದ್ದರೂ, ಅವರೇ ನೇಮಿಸಿದ ಉಪಮುಖ್ಯಮಂತ್ರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಂತಹ ಸಭೆಯ ನಿರ್ಣಯ ಪಕ್ಷಪಾತದಿಂದ ಕೂಡಿರುವ ಸಾಧ್ಯತೆ ಇರಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ನಿರ್ಧಾರ ಕೈಗೊಳ್ಳಬಹುದು ಎಂದು ಮೆಹ್ತಾ ವಾದದಲ್ಲಿ ತಿಳಿಸಿದರು.
ಅತಿ ದೊಡ್ಡ ನಿರ್ಣಯ:ರಾಜ್ಯಪಾಲರಿಗೆ 91 ಪುಟಗಳ ಸಚಿವ ಸಂಪುಟದ ತೀರ್ಮಾನ ಸಲ್ಲಿಸಲಾಗಿದೆ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಅತಿದೊಡ್ಡ ಸಚಿವ ಸಂಪುಟದ ನಿರ್ಣಯ ತೆಗೆದುಕೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿ ವಾಸ್ತವಿಕ ಅಂಶಗಳನ್ನು ಪರಿಶೀಲಿಸಿ ರಾಜ್ಯ ಅಡ್ವೋಕೇಟ್ ಜನರಲ್‌ಗೆ (ಎಜಿ) ಕಳುಹಿಸಿದ್ದಾರೆ. ಅದರ ಆಧಾರದ ಮೇಲೆ ಎಜಿ ಅಭಿಪ್ರಾಯ ನೀಡಿದ್ದಾರೆ. ಆ ಅಭಿಪ್ರಾಯವನ್ನು ಕ್ಯಾಬಿನೆಟ್ ಅಕ್ಷರಶಃ ಕಾಪಿ (ನಕಲು) ಮಾಡಿದೆ. ಎಜಿ ಅಭಿಪ್ರಾಯವನ್ನು ಅಲ್ಪ ವಿರಾಮ, ಪೂರ್ಣವಿರಾಮಗಳನ್ನೂ ಬಿಡದೇ ಯಥಾವತ್ತಾಗಿ ಅಂಗೀಕರಿಸಿದೆ. ಬೆಂಗಳೂರು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ಆದರೆ, ಎಜಿ ಅವರ ಅಭಿಪ್ರಾಯವನ್ನೇ ಸಂಪುಟದ ನಿರ್ಣಯದ ಹೆಸರಿನಲ್ಲಿ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ರಾಜ್ಯ ಸಂಪುಟದ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ತಮ್ಮ ವಿವೇಚನೆಯನ್ನೇ ಬಳಸಿಲ್ಲ ಎಂದು ಮೆಹ್ತಾ ವಿವರಿಸಿದರು.