ಬೆಂಗಳೂರು: ಬಹಿರಂಗ ಹೇಳಿಕೆ ನೀಡುತ್ತಿರುವವರಿಗೆ ಶೋಕಾಸ್ ನೋಟಿಸ್ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಈ ವಿಚಾರವಾಗಿ ರಾಜಿ ಇಲ್ಲ. ಯಾರೂ ಮಿತಿ ಮೀರಬಾರದು. ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಬಹಿರಂಗ ಹೇಳಿಕೆ ನೀಡುತ್ತಿರುವವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುತ್ತೇನೆ. ಮಂತ್ರಿಗಳಿಗೆ ನೋಟಿಸ್ ನೀಡುತ್ತೀರಾ ಎಂಬ ಪ್ರಶ್ನೆಗೆ, ಯಾರ‍್ಯಾರಿಗೆ ನೋಟಿಸ್ ಕೊಡುತ್ತೇನೆ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಶಾಸಕರು, ಮಂತ್ರಿಗಳು ಸಭೆ ನಡೆಸುವ ಹಾಗಿಲ್ಲ:ಯಾವುದೇ ಶಾಸಕರು, ಮಂತ್ರಿಗಳು ಮನೆಯಲ್ಲಿ ಯಾವುದೇ ಸಭೆ ಮಾಡಲು ಅವಕಾಶ ಇಲ್ಲ. ಒಂದು ವೇಳೆ ಪಕ್ಷದ ಕಚೇರಿ ಕಿರಿದಾಗಿದ್ದರೆ, ಯಾವುದಾದರೂ ಸಮುದಾಯ ಭವನದಲ್ಲಿ ಸಭೆ ಮಾಡಲಿ. ಕಡ್ಡಾಯವಾಗಿ ಶಾಸಕರ ಮನೆಯಲ್ಲಿ ಪಕ್ಷದ ಸಭೆ ಮಾಡುವಂತಿಲ್ಲ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲೆಯಲ್ಲಿ ಕಡ್ಡಾಯ ಸಭೆ: ಉಸ್ತುವಾರಿ ಜಿಲ್ಲಾ ಸಚಿವರು ಕಡ್ಡಾಯವಾಗಿ 15 ದಿನಗಳಿಗೊಮ್ಮೆ ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ ಕಾರ್ಯಕರ್ತರ ಅಹವಾಲು ಸ್ವೀಕರಿಸಬೇಕು. ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ರಾಜ್ಯ ಮಟ್ಟದಲ್ಲಿ ತಿಂಗಳಿಗೆ ಒಂದು ಬಾರಿ ಕೆಪಿಸಿಸಿ ಕಚೇರಿಯಲ್ಲಿ ಸಚಿವರು ಸಭೆ ನಡೆಸಬೇಕು. ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಸಮಸ್ಯೆ ಪರಿಹರಿಸಬೇಕು. ಸಿಎಂ ಸದ್ಯದಲ್ಲೇ ದಿನಾಂಕ ನಿಗದಿ ಮಾಡಿ ಕಾರ್ಯಕ್ರಮವನ್ನು ಆರಂಭಿಸಲಿದ್ದಾರೆ ಎಂದು ತಿಳಿಸಿದರು.
ನಿಷ್ಕ್ರಿಯ ಬ್ಲಾಕ್ ಅಧ್ಯಕ್ಷರ ಬದಲಾವಣೆ:ಐದು ವರ್ಷ ಆದ ಮೇಲೂ ನಿಷ್ಕ್ರಿಯವಾಗಿರುವ ಬ್ಲಾಕ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರನ್ನು ಬದಲಾಯಿಸಿ ಹೊಸ ಹೆಸರು ಪ್ರಸ್ತಾಪ ಸಲ್ಲಿಸಬೇಕು. ಒಂದು ತಿಂಗಳ ಒಳಗೆ ಅದನ್ನು ಭರ್ತಿ ಮಾಡಿ ಎಂದು ಇದೇ ವೇಳೆ ತಿಳಿಸಲಾಗಿದೆ ಎಂದು ಡಿಕೆಶಿ ಹೇಳಿದರು.