ಚಿಕ್ಕಮಗಳೂರು:ಯಾರೋ ಬೇಕಂತಲೇ ವ್ಯವಸ್ಥಿತವಾಗಿ ದುಡ್ಡಿನ ಮದ, ಅಹಂಕಾರದಿಂದ ಗೋಬ್ಯಾಕ್ ಅಭಿಯಾನ ಮಾಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 'ಗೋಬ್ಯಾಕ್ ಶೋಭಕ್ಕ' ಪತ್ರ ಅಭಿಯಾನಕ್ಕೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ಕಳೆದ ಚುನಾವಣೆಯಲ್ಲಿಯೂ ಕೂಡ ಇದೇ ರೀತಿಯ ಅಭಿಯಾನ ಮಾಡಿದ್ದರು. ಇದೀಗ ಈ ಬಾರಿಯ ಚುನಾವಣೆಯಲ್ಲೂ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ನಾಯಕರು ಉತ್ತರ ನೀಡುತ್ತಾರೆ. ಹೈಕಮಾಂಡ್ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು.
ಗೋಬ್ಯಾಕ್ ಪತ್ರ ಯಾರು ಬರೆದರು, ಎಲ್ಲೆಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ ಎಂಬುದರ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಂಡಿದೆ. ಚುನಾವಣೆಯ ಸಮಯದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿರುವವರ ವಿರುದ್ಧ ಈ ರೀತಿ ಆರೋಪ ಕೇಳಿ ಬಂದಾಗ ಸಹಜವಾಗಿಯೇ ಹೈಕಮಾಂಡ್ ವರದಿ ತರಿಸಿ ಪರಿಶೀಲನೆ ನಡೆಸುತ್ತದೆ. ಈ ವರದಿಯಲ್ಲಿ ಸತ್ಯ ಏನೆಂಬುದು ಅವರಿಗೆ ತಿಳಿಯುತ್ತದೆ ಎಂದರು.