ಕಾಡುಮಲ್ಲೇಶ್ವರ ಸ್ವಾಮಿಯ ಬೃಹತ್ ಬ್ರಹ್ಮರಥೋತ್ಸವ: ಲಕ್ಷಾಂತರ ಜನರು ಭಾಗಿ ಬೆಂಗಳೂರು: ಶ್ರೀ ಭ್ರಮರಾಂಬ ಸಮೇತ ಕಾಡುಮಲ್ಲೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಾಡುಮಲ್ಲೇಶ್ವರ ಗೆಳಯರ ಬಳಗದ ಸಹಯೋಗದಲ್ಲಿ ಶುಕ್ರವಾರ ಮಹಾಶಿವರಾತ್ರಿ ನಿಮಿತ್ತ ಎರಡು ದಿನಗಳ ಕಾಲ ಬ್ರಹ್ಮರಥೋತ್ಸವ ಸಮಾರಂಭ ಜರುಗುತ್ತಿದೆ.
ಇಂದು ಸಂಜೆಯಿಂದ ಪ್ರಾರಂಭವಾಗುವ ಶಿವರಾತ್ರಿ ಹಬ್ಬದ ಪ್ರಯುಕ್ತ ಜಾಗರಣೆ ಮತ್ತು ಮಹಿಳಾ ತಂಡದಿಂದ ರಾತ್ರಿಯಿಡೀ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಶನಿವಾರ ಬೆಳಗ್ಗೆ ಕಾಡುಮಲ್ಲಿಕಾರ್ಜುನ ಸ್ವಾಮಿಯ ಮುಖ್ಯ ಬ್ರಹ್ಮರಥೋತ್ಸವ ಜರುಗಲಿದೆ.
ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಡಾ.ಬಿ.ಕೆ.ಶಿವರಾಂ ಅವರು ಶಿವರಾತ್ರಿ ಆಚರಣೆಯ ಕುರಿತು ಮಾತನಾಡಿ, ಎರಡು ದಿನಗಳ ಕಾಲ ಜರುಗುವ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಎರಡು ಲಕ್ಷ ಭಕ್ತ ಜನರು ಭಾಗವಹಿಸುತ್ತಿದ್ದಾರೆ. ಬ್ರಹ್ಮರಥೋತ್ಸವ ಶನಿವಾರ 10 ಗಂಟೆಗೆ ಆರಂಭವಾಲಿದ್ದು, 300ಕ್ಕೂ ಹೆಚ್ಚು ಕಲಾ ತಂಡಗಳು, ಪಂಜಿನ ಆರತಿ ನೆರವೇರಲಿದೆ. ಬಂದ ಭಕ್ತರಿಗೆ ಪ್ರಸಾದ ವಿನಿಯೋಗ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ತುರ್ತು ಅವಶ್ಯಕತೆಗಾಗಿ ವೈದ್ಯರ ತಂಡ, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಮತ್ತು ಕಾಡು ಮಲ್ಲೇಶ್ವರ ಗೆಳಯರ ಬಳಗದ ಸಹಯೋಗದಲ್ಲಿ ಕಳೆದ 16 ವರ್ಷಗಳಿಂದ ಕಾರ್ಯಕ್ರಮ ನಡೆಯುತ್ತಿದೆ. ಶಿವನಿಗೆ ಅಭಿಷೇಕ ಪ್ರಿಯ, ಕಾಡು ಮಲ್ಲಿಕಾರ್ಜುನ ಸ್ವಾಮಿಗೆ ಬೆಳಗ್ಗೆ ಅಭಿಷೇಕ ಮಾಡಲಾಗುತ್ತದೆ. ಶಿವನ ಆರಾಧನೆಯಿಂದ ನಾವು ಮಾಡಿದ ಪಾಪ ಕರ್ಮಗಳಿಂದ ಮುಕ್ತಿ ಹೊಂದಿ, ಪುಣ್ಯಕಾರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಂದು ಮಹಿಳಾ ದಿನಾಚರಣೆ ಆಗಿರುವುದರಿಂದ ಶಿವರಾತ್ರಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮ ಸಂಪೂರ್ಣ ಮಹಿಳಾ ಕಲಾವಿದರು ನಡೆಸಿ ಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ದೇವಾಲಯದ ಇತಿಹಾಸ ಹೇಳಿದ ಅರ್ಚಕರು: ಕಾಡುಮಲ್ಲೇಶ್ವರ ಸಮೂಹದ ದಕ್ಷಿಣಮುಖ ನಂದಿ ತೀರ್ಥಕಲ್ಯಾಣಿ ದೇವಸ್ಥಾನದ ಪ್ರಧಾನ ಅರ್ಚಕ ರವಿಶಂಕರ್ ಭಟ್ ಮಾತನಾಡಿ, ಇಂದು ಶಿವರಾತ್ರಿ ಇರುವುದಿಂದ ಬೆಳಗ್ಗೆ 4 ಗಂಟೆಯಿಂದ 6 ಗಂಟೆಯವರೆಗೆ ಪಂಚಾಮೃತ ಅಭಿಷೇಕ ಮತ್ತು ರುದ್ರಾಭಿಷೇಕ ಬಳಿಕ ಮಹಾ ಮಂಗಳಾರತಿ ಮಾಡಲಾಯಿತು. ಬಳಿಕ ಸಾವಿರಾರೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ನಿರಂತರವಾಗಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಶನಿವಾರ ರಾತ್ರಿ 9 ಗಂಟೆಗೆ ದೇವಾಲಯದ ಬಾಗಿಲು ಮುಚ್ಚುತ್ತೇವೆ. ಅಲ್ಲಿಯವರೆಗೆ ಭಕ್ತರ ದರ್ಶನಕ್ಕೆ ಅನವು ಮಾಡಿಕೊಡಲಾಗುವುದು ಎಂದು ಅರ್ಚಕರು ಹೇಳಿದರು.
1997ರಲ್ಲಿ ಈ ದೇವಸ್ಥಾನದ ಮಣ್ಣಿನಲ್ಲಿ ಮುಚ್ಚಿ ಹೋಗಿತ್ತು. ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ಪುನಃ ಜೀರ್ಣೋದ್ದಾರವಾಗಿದೆ. ಈ ಸ್ಥಳವನ್ನು ಬಾಂಬೆ ಕಡೆಯವರಿಗೆ ಮಾರಾಟ ಮಾಡಲಾಗಿತ್ತು. ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಡಾ.ಬಿ.ಕೆ.ಶಿವರಾಂ ಮತ್ತು ಹರಿಪ್ರಸಾದ್ ಅವರು ಅನೇಕ ಹೋರಾಟದ ನಡೆಸಿದ ಬಳಿಕ ಈ ಜಾಗ ಉಳಿಸಿಕೊಂಡರು. ಬಳಿಕ ಇಲ್ಲಿ ಬಿದ್ದ ಮಣ್ಣನ್ನು ಹೊರ ತೆಗೆಸಿ ಸ್ವಚ್ಛಗೊಳಿಸಿದಾಗ ಶಿವ ಕಂಡಿದ್ದಾನೆ. ಬಳಿಕ ನಂದಿ ಬಾಯಿಯಿಂದ ನೀರು ಬರಲು ಪ್ರಾರಂಭಿಸಿತು. ನಂದಿ ಬಾಯಿಯಿಂದ ನೀರು ಬಂದು ಶಿವನಿಗೆ ಅಭಿಷೇಕವಾಗಿ ಕೊಳಕ್ಕೆ ಹೋಗುತ್ತದೆ ಎಂದು ದೇವಾಲಯದ ಇತಿಹಾಸದ ಬಗ್ಗೆ ಅರ್ಚಕ ರವಿಶಂಕರ್ ಭಟ್ ಮಾಹಿತಿ ನೀಡಿದರು.
ಪ್ರವೀಣ್ ಶೆಟ್ಟಿ ಹೇಳಿದ್ದು ಹೀಗೆ:ಇವತ್ತು ಆಧ್ಯಾತ್ಮಿಕವಾಗಿ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿವೆ. ಇಂದು ಶಿವರಾತ್ರಿ, ಭಗವಂತ ಎಲ್ಲ ಭಕ್ತರಿಗೆ ಒಳ್ಳೆದು ಮಾಡಲಿ. ಎಲ್ಲಿಯೂ ನೀರಲ್ಲಂದ್ರೆ ಈ ಕಲ್ಯಾಣಿಯಲ್ಲಿ ಸದಾ ನೀರು ಇರುತ್ತೆ. ಬೆಂಗಳೂರಿಗೆ ನೀರಿನ ಅಭಾವ ತಲೆದೋರಿದೆ. ಸರ್ಕಾರ ನೀರಿನ ಸಮಸ್ಯೆ ಸರಿಯಾಗಿ ಬಗೆಹರಿಸಿಲ್ಲ. ಇಂದು ತಮಿಳುನಾಡು ಬಿಟ್ಟು ಕನ್ನಡಿಗರಿಗೆ ಕುಡಿಯಲು ನೀರಿಲ್ಲ. ಮೇಕೆದಾಟು ಯೋಜನೆಯೂ ಸಹ ಇನ್ನು ಆರಂಭವಾಗಿಲ್ಲ. ಇದೊಂದು ಆಘಾತಕಾರಿ. ಕೂಡಲೇ ಸರ್ಕಾರ ಬೆಂಗಳೂರಿಗರಿಗೆ ಕೂಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದರು.
ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್, ಚಂದ್ರಶೇಖರ್ ನಾಯ್ಡು ಸೇರಿದಂತೆ ಕಾಡುಮಲ್ಲೇಶ್ವರ ಗೆಳಯರ ಬಳಗದ ಪದಾಧಿಕಾರಿಗಳು, ಸದಸ್ಯರು ಬ್ರಹ್ಮರಥೋತ್ಸವದ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿದ್ದಾರೆ.
ಓದಿ:ಮುರುಡೇಶ್ವರದಲ್ಲಿ ಶಿವರಾತ್ರಿ ಸಂಭ್ರಮ: ಶಿವ ದರ್ಶನ ಪಡೆದ ಸಾವಿರಾರು ಭಕ್ತರು