ಶಿವಮೊಗ್ಗ:ಎಲ್‌ಐಸಿ ಪಾಲಿಸಿಯಇಸಿಎಸ್ ಹಣವನ್ನು ಸರಿಯಾದ ಸಮಯಕ್ಕೆ ಕಟಾಯಿಸಿ ನೀಡದ ಬ್ಯಾಂಕ್, ಸಂಬಂಧಿತ ಅರ್ಜಿದಾರರಿಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಗುರುವಾರ ಆದೇಶಿಸಿತು.
ತೀರ್ಥಹಳ್ಳಿ ನಿವಾಸಿ ಹೆಚ್.ಆರ್.ಶ್ರೀಧರ್ ಎಂಬವರು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ತೀರ್ಥಹಳ್ಳಿ ಶಾಖಾ ವ್ಯವಸ್ಥಾಪಕರು (ಮೊದಲ ಎದುರುದಾರ) ಹಾಗೂ ತೀರ್ಥಹಳ್ಳಿಯ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರ (ಎರಡನೇ ಎದುರುದಾರ) ವಿರುದ್ಧ ಸೇವಾ ನ್ಯೂನತೆ ಆರೋಪದ ಮೇಲೆ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾ ನ್ಯೂನತೆ ಪರಿಗಣಿಸಿ, ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ದೂರಿನ ವಿವರ:ದೂರುದಾರರು ಎಲ್ಐಸಿಯ ಜೀವನ್ ಆರೋಗ್ಯ ಪಾಲಿಸಿ ಪಡೆದಿದ್ದು, ಅದರ ಕಂತು 24-11-2012ರಿಂದ 24-01-2044ರ ವರೆಗೆ ಚಾಲ್ತಿಯಲ್ಲಿತ್ತು. ಪಾಲಿಸಿಯ ಮಾಸಿಕ ವಂತಿಕೆಯನ್ನು ಪ್ರತಿ ತಿಂಗಳ 24ರಂದು ದೂರುದಾರರ ಉಳಿತಾಯ ಖಾತೆಯಿಂದ ಇಸಿಎಸ್ ಮೂಲಕ ಕಟಾಯಿಸಿ ಪಾವತಿಸಲು ತೀರ್ಥಹಳ್ಳಿ ಯೂನಿಯನ್ ಬ್ಯಾಂಕ್ ಒಪ್ಪಿಗೆ ನೀಡಿತ್ತು. ಅದರಂತೆ, ಬ್ಯಾಂಕ್ನವರು ಪ್ರತಿ ತಿಂಗಳ 24ರಂದು ವಿಮಾ ವಂತಿಕೆಯನ್ನು ಕಟಾಯಿಸಿ ಎಲ್ಐಸಿಗೆ ಜಮಾ ಮಾಡಬೇಕಾಗಿತ್ತು. ಈ ನಡುವೆ, ದೂರುದಾರರು 2020ರ ಜ.30ರಂದು ಅನಾರೋಗ್ಯದ ನಿಮಿತ್ತ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು. ನಂತರ ಎಲ್‌ಐಸಿ ವ್ಯವಸ್ಥಾಪಕರಿಗೆ ವೈದ್ಯಕೀಯ ಚಿಕಿತ್ಸೆ ಪಡೆದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಚಿಕಿತ್ಸಾ ವೆಚ್ಚವನ್ನು ಪಾವತಿಸಲು ಕೋರಿದ್ದರು. ಆದರೆ, ಬ್ಯಾಂಕ್ನವರು ಎಲ್‌ಐಸಿ ಪಾಲಿಸಿಯ ವಂತಿಕೆ ಜಮಾ ಮಾಡಿಲ್ಲ ಎಂದು ತಮ್ಮ ಅರ್ಜಿಯನ್ನು ವ್ಯವಸ್ಥಾಪಕರು ತಿರಿಸ್ಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.