ಶಿವಮೊಗ್ಗ ಮಹಾನಗರ ಪಾಲಿಕೆಯ ತೆರಿಗೆ ಸಂಗ್ರಹ (ETV Bharat) ಶಿವಮೊಗ್ಗ: ಪ್ರಸ್ತಕ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಹಾನಗರ ಪಾಲಿಕೆಯು ಶೇ.5ರಷ್ಟು ರಿಯಾಯಿತಿ ಘೋಷಿಸಿದ ಪರಿಣಾಮ ಏಪ್ರಿಲ್‌ನಲ್ಲಿ 35 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಜುಲೈ ನಂತರ ತೆರಿಗೆ ಪಾವತಿ ಮಾಡಿದರೆ ಶೇ.2ರಷ್ಟು ದಂಡ ವಿಧಿಸಲು ಪಾಲಿಕೆ ನಿರ್ಧರಿಸಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವ 1.70 ಲಕ್ಷ ಜನರಿದ್ದಾರೆ. 2024-25ರಲ್ಲಿ 55 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ ಇದೆ. ಈ ಪೈಕಿ ಈಗಾಗಲೇ ಮೊದಲ ತಿಂಗಳಲ್ಲಿ 65,000 ಜನ ತೆರಿಗೆ ಕಟ್ಟಿದ್ದಾರೆ. ಈ ಕುರಿತು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾಹಿತಿ ನೀಡಿ, ಮಹಾನಗರ ಪಾಲಿಕೆಯು ಸುಮಾರು 70 ಚದರ ಕಿಮೀ ಇದೆ. ಪಾಲಿಕೆಯ ವ್ಯಾಪ್ತಿಯಲ್ಲಿ 1.10 ಲಕ್ಷಕ್ಕೂ ಹೆಚ್ಚು ಗೃಹ, ವಾಣಿಜ್ಯ ಹಾಗೂ ಖಾಲಿ ನಿವೇಶನಗಳಿವೆ. ಪಾಲಿಕೆ ಆಸ್ತಿ ತೆರಿಗೆಯ ಡಿಮ್ಯಾಂಡ್ 55 ಕೋಟಿಯಷ್ಟು ಇದೆ ಎಂದು ಹೇಳಿದರು.
2024-25ನೇ ಆರ್ಥಿಕ ಸಾಲಿನಲ್ಲಿ ಏಪ್ರಿಲ್ ತಿಂಗಳಲ್ಲಿ ಯಾರು ಆಸ್ತಿ ತೆರಿಗೆ ಪಾವತಿ ಮಾಡುತ್ತಾರೂ, ಅವರಿಗೆ ಶೇ.5ರಷ್ಟು ಆಸ್ತಿ ತೆರಿಗೆ ವಿನಾಯತಿ ನೀಡಲಾಗಿತ್ತು. ತೆರಿಗೆ ವಿನಾಯತಿ ಅವಕಾಶವನ್ನು ಬಳಸಿಕೊಂಡು 35 ಕೋಟಿಯಷ್ಟು ತೆರಿಗೆ ಪಾವತಿ ಮಾಡಿದ್ದಾರೆ. ಇದೇ ರೀತಿ, ಮೇ ಹಾಗೂ ಜೂನ್ ನಲ್ಲಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಿದರೆ ಯಾವುದೇ ವಿನಾಯತಿ ಹಾಗೂ ದಂಡ ಇರುವುದಿಲ್ಲ. ಜುಲೈ ಬಳಿಕ ಆಸ್ತಿ ತೆರಿಗೆ ಪಾವತಿ ಮಾಡಬೇಕಾದರೆ, ಅವರು ಶೇ.2ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಯಾವುದೇ ನಗರ ಪಟ್ಟಣ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾಗರಿಕರ ತೆರಿಗೆ ಪಾವತಿ ಅನುಕೂಲಕರವಾಗುತ್ತದೆ ಎಂದು ತಿಳಿಸಿದರು.
ಆಸ್ತಿ ತೆರಿಗೆ ಹೆಚ್ಚಳ, ಆಕ್ಷೇಪ:ಮತ್ತೊಂದೆಡೆ,ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ಅಣ್ಣಾ ಹಜಾರೆ ಹೋರಾಟ ಸಮಿತಿಯ ಸಂಚಾಲಕ ವಸಂತ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ರವರು ಆಸ್ತಿ ತೆರಿಗೆಯ ಸಂಗ್ರಹದಲ್ಲಿ ಭಾರಿ ಸಾಧನೆ ಮಾಡಿದ್ದೇವೆ ಎಂದು ಹೇಳಿ ಕೊಳ್ಳುತ್ತಿದ್ದಾರೆ. ಇದು ಅವರ ಸಾಧನೆ ಅಲ್ಲ. ಬದಲಾಗಿ ಆಸ್ತಿ ತೆರಿಗೆಯನ್ನು ಶೇ.30ರಿಂದ ಶೇ.40ರಷ್ಟು ಹೆಚ್ಚಳ ಮಾಡಿರುವುದರಿಂದ ತೆರಿಗೆ ಹೆಚ್ಚಿಗೆ ಬಂದಿದೆ ಅಷ್ಟೇ. ತೆರಿಗೆ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಒಂದು ವರ್ಷದಲ್ಲಿ ತೆರಿಗೆ ಹೆಚ್ಚಳ ಮಾಡಿರುವುದರಿಂದ ಜನರಿಗೆ ತೆರಿಗೆ ಪಾವತಿ ಮಾಡಲು ಆಗುತ್ತಿಲ್ಲ. ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಈಗ ಇಲ್ಲ. ತೆರಿಗೆ ಬದಲಾವಣೆ ಮಾಡುವಾಗ ಆಯುಕ್ತರು ಜನರ ಜೊತೆ ಚರ್ಚೆ ನಡೆಸದೇ ಹೆಚ್ಚಳ ಮಾಡಿದ್ದಾರೆ. ಚುನಾವಣೆ ಇದ್ದ ಕಾರಣ ಜನರು ಸಹ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಯದ್ವಾತದ್ವಾ ತೆರಿಗೆ ಜಾಸ್ತಿ ಆಗಿದೆ. ಚುನಾವಣೆ ಹಾಗೂ ಬರಗಾಲ ಇತ್ತು. ಇದರಿಂದ ಪಾವತಿಗೆ ಇರುವ ರಿಯಾಯಿತಿಯನ್ನು ಇನ್ನೆರಡು ತಿಂಗಳು ಹೆಚ್ಚಿಸಬಹುದಾಗಿತ್ತು ಎಂದರು.
ಗೈಡೈನ್ಸ್ ವ್ಯಾಲ್ಯೂ ಬೆಸ್ ಆಗಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಇದನ್ನು ಬಿಟ್ಟು ಬೇರೆ ರೀತಿಯ ತೆರಿಗೆ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಜನರಿಗೆ ಹೊರೆ ಆಗದ ರೀತಿಯಲ್ಲಿ ತೆರಿಗೆ ಜಾರಿ ಮಾಡಬೇಕಿದೆ. ಸರ್ಕಾರ ತಕ್ಷಣ ಇದರ ಬಗ್ಗೆ ಗಮನ ಹರಿಸಬೇಕು ಕಾನೂನು ಬದಲಾವಣೆ ತರಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ:ಬಿಬಿಎಂಪಿಯಿಂದ ಬೃಹತ್ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಬಿಡುಗಡೆ