ಹಾವೇರಿ: ಶಿಗ್ಗಾಂವ್ ಉಪಚುನಾವಣಿಯ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವ್ ನಿವಾಸದ ಸಭಾಭವನದಲ್ಲಿ ಶುಕ್ರವಾರ ಸಂಘಟನಾತ್ಮಕ ಸಭೆ ನಡೆಯಿತು. ಸಭೆಗೂ ಮುನ್ನ ಬಿಜೆಪಿ ವೀಕ್ಷಕರು ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದರು. ಆಗ ಸುಮಾರು 57 ಆಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ಆಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಶಿಗ್ಗಾಂವ್ ಉಪಚುನಾವಣೆಯ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ.
ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ, ಶ್ರೀಕಾಂತ ದುಂಡಿಗೌಡ್ರ, ಹಾವೇರಿ ಜಿಲ್ಲಾ ಬಿಜಿಪಿ ಮಹಿಳಾ ಸಂಘದ ಮಾಜಿ ಅಧ್ಯಕ್ಷ ಶೋಭಾ ನಿಸ್ಸೀಮಗೌಡ್ರ, ಉದ್ಯಮಿ ಶಶಿಧರ ಯಲಿಗಾರ್ ಸೇರಿದಂತೆ ಸುಮಾರು 57 ಆಕಾಂಕ್ಷಿಗಳು ಬಿಜೆಪಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ನಂತರ ನಡೆದ ಸಂಘಟನಾತ್ಮಕ ಸಭೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾಮೋಹನದಾಸ್ ಅಗರವಾಲ್ ಚಾಲನೆ ನೀಡಿದರು.
ಸಭೆ ಉದ್ಘಾಟಿಸಿ ಮಾತನಾಡಿದ ಅಗರವಾರ್ ಶಿಗ್ಗಾಂವ್ ಉಪಚುನಾವಣಿಯ ಸಂಘಟನಾತ್ಮಕ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಉತ್ಸುಕತೆಯಿಂದ ಭಾಗವಹಿಸಿದ್ದು ನೋಡಿದರೆ ಈ ಬಾರಿಯೂ ಸಹ ಬಿಜೆಪಿ ಉಪಚುನಾವಣೆಯಲ್ಲಿ ಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಸವರಾಜ ಬೊಮ್ಮಾಯಿ ಸಂಸದರಾಗಿದ್ದರಿಂದ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು 57 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಸಾಕಷ್ಟು ಪೈಪೋಟಿ ಇದೆ. ಬಿಜೆಪಿ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಕಾರ್ಯಕರ್ತರಿರುವ ಪಕ್ಷವಾಗಿದ್ದು, ಇಲ್ಲಿ ಕಾರ್ಯಕರ್ತರಿಗೂ ಪ್ರಧಾನಮಂತ್ರಿ ಹುದ್ದೆ ಸಿಗುತ್ತೆ ಎಂದು ತಿಳಿಸಿದರು.