ಮಂಗಳೂರು:ವಿಧಾನಸೌಧದಲ್ಲಿ ನಾಯಿಗಳ ಹಾವಳಿ ತಪ್ಪಿಸಲು ಎನ್‌ಜಿಒ ಸಹಕಾರದಿಂದ ಜಾಗ ಗುರುತಿಸಲಾಗಿದ್ದು, ಶೆಲ್ಟರ್ ಕಟ್ಟಲಾಗುತ್ತಿದೆ. ಪಿಡಬ್ಲ್ಯುಡಿಯಿಂದ ಶೆಲ್ಟರ್ ಕಾಮಗಾರಿ ನಡೆಯುತ್ತಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿಂದು ಮಾತನಾಡಿದ ಅವರು, ವಿಧಾನಸೌಧದಲ್ಲಿ ಸದ್ಯ 52 ನಾಯಿಗಳಿದ್ದು, ಮರಿಗಳು ಹುಟ್ಟದಂತೆ ಎಲ್ಲಾ ನಾಯಿಗಳಿಗೂ ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತದೆ. ಇರುವ ನಾಯಿಗಳನ್ನು ಶೆಲ್ಟರ್‌ನಲ್ಲಿಟ್ಟು ಎಲ್ಲೂ ಅಡ್ಡಾಡದಂತೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಿ ಅಲ್ಲಿಯೇ ಅಡ್ಡಾಡಲು ವ್ಯವಸ್ಥೆ ಮಾಡಲಾಗುತ್ತದೆ. ಶ್ವಾನಗಳ ಖರ್ಚು-ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
ಈ ಬೀದಿನಾಯಿಗಳಿಗೆ ಪ್ರತ್ಯೇಕ ವಸತಿ ಮಾಡಿಕೊಟ್ಟು, ಊಟೋಪಚಾರ ನೀಡಿ ಸಲಹಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಶ್ವಾನಗಳ ಜೀವಿತಾವಧಿ 12 ವರ್ಷಗಳು. ಈಗ ಗುರುತಿಸಲಾಗಿರುವ ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ವಿಧಾನಸೌಧದ ಆವರಣದೊಳಗೆ ಪ್ರತ್ಯೇಕ ಶೆಡ್ ಮಾಡಿ ಸಾಕಲು ಏಜೆನ್ಸಿ ನೇಮಕ ಮಾಡಲಾಗುತ್ತದೆ. ಅವುಗಳಿಗೆ ಅಲ್ಲೇ ತಿರುಗಾಟಕ್ಕೂ ಅವಕಾಶ ಮಾಡಿಕೊಡಲಾಗುತ್ತದೆ. ಕಾಲಕ್ರಮೇಣ ಅಲ್ಲಿನ ಬೀದಿ ನಾಯಿಗಳ ಸಂತತಿ ಕಡಿಮೆಯಾಗುತ್ತಾ ಸಮಸ್ಯೆ ನೀಗಲಿದೆ. ಅಲ್ಲಿಯವರೆಗೆ ಈಗಿರುವ ಶ್ವಾನಗಳಿಗೆ ಸರ್ವ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.