ಮಂಗಳೂರು (ದಕ್ಷಿಣ ಕನ್ನಡ): ಷೇರು ಟ್ರೇಡಿಂಗ್ನಲ್ಲಿ ಹಣ ತೊಡಗಿಸಿದರೆ ಶೇ.500ರಷ್ಟು ಲಾಭಾಂಶ ಬರುತ್ತದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 46 ಲಕ್ಷ ರೂ ವಂಚಿಸಿದ ಬಗ್ಗೆ ನಗರದ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೊಬ್ಬರ ವಾಟ್ಸಾಪ್ ನಂಬರ್ಗೆ ಶ್ರದ್ಧಾ ಬೆಲಾನಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಷೇರು ಟ್ರೇಡಿಂಗ್ನಲ್ಲಿ ಹಣ ತೊಡಗಿಸಿದರೆ ಶೇ.500ರಷ್ಟು ಲಾಭಾಂಶ ಬರುವುದಾಗಿ ತಿಳಿಸಿದ್ದರು. ಅದರಂತೆ ಈ ವ್ಯಕ್ತಿ ಅವರು ಕಳುಹಿಸಿದ https://play.google.someco.shop/com.rehvu.dqlgdf/install.html ಎಂಬ ಲಿಂಕ್ ಒತ್ತಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದರು. ನಂತರ ಅವರು H 777 ARES Stock Exchange Group ಎಂಬ ವಾಟ್ಸಾಪ್ ಗ್ರೂಪ್ಗೆ ಸೇರಿಸಿದ್ದರು.
ಗ್ರೂಪ್ನಲ್ಲಿ ಶ್ರದ್ಧಾ ಬೆಲಾನಿ ಎಂಬವರು ಗ್ರೂಪ್ ಅಡ್ಮಿನ್ ಆಗಿದ್ದು, ಸದರಿ ಟ್ರೇಡ್ನಲ್ಲಿ ಅಭಿಷೇಕ್ ರಾಮ್ ಜೀ ಎಂಬವರು ಚೀಫ್ ಆಗಿರುತ್ತಾರೆ. ಮೊದಲಿಗೆ ಈ ವ್ಯಕ್ತಿ ಸ್ಟಾಕ್ ಖರೀದಿ ಮಾಡಲು ತನ್ನ ಬ್ಯಾಂಕ್ನಿಂದ 2 ಲಕ್ಷ ರೂ ಹಣವನ್ನು ಆರ್ಟಿಜಿಎಸ್ ಮಾಡಿದ್ದರು. ಮರುದಿನ ಆ ಸ್ಟಾಕ್ ಅನ್ನು ಸೇಲ್ ಮಾಡಿದ್ದು, ಇದರಿಂದ 50,000 ರೂ ಲಾಭವಾಗಿ ಬಂದಿರುತ್ತದೆ. ಇದನ್ನು ನಂಬಿದ ಈ ವ್ಯಕ್ತಿ ಇನ್ನು ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಅದೇ ಖಾತೆಗೆ ಪುನಃ 5,00,000 ರೂ ಹಣವನ್ನು ಹೂಡಿಕೆ ಮಾಡಿದ್ದಾರೆ. ನಂತರ 9,00,000 ರೂ ಹಣ ಸೇರಿದಂತೆ ನವೆಂಬರ್ 1 ರಿಂದ 19 ರವರೆಗೆ ಒಟ್ಟು 29,00,000 ರೂ ಹಾಗೂ ನವೆಂಬರ್ 27ರಂದು 1,00,000 ರೂ ಹಣ ಹೂಡಿಕೆ ಮಾಡಿದ್ದಾರೆ. ಹೀಗೆ ಒಟ್ಟು 46,00,000 ರೂ ಹಣ ವರ್ಗಾವಣೆ ಮಾಡಿದ್ದಾರೆ.